ಹಾಸನ, 8 ಅಕ್ಟೋಬರ್ (ಹಿ.ಸ.):
ಆ್ಯಂಕರ್:ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಮಾರಾಟ ಮಾಡಲು ತಾತ್ಕಾಲಿಕ ಪರವಾನಗಿ ಪಡೆದು ಮಾರಾಟ ಮಾಡುವ ಸಂದರ್ಭದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಟಾಕಿ ಮಾರಾಟ ಕುರಿತು ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲಾ ಮಟ್ಟದಲ್ಲಿ ಒಂದು ಸಮಿತಿ ರಚಿಸಿ ಅವರ ಕರ್ತವ್ಯ ಮತ್ತು ಜವಾಬ್ದಾರಿ ನಿರ್ವಹಣೆಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅ.19 ರಿಂದ 22 ವರೆಗೆ ಬೆಳಗ್ಗೆ 9.30 ರಿಂದ ಸಂಜೆ 7.30 ವರೆಗೆ ಮಾತ್ರ ಮಾರಾಟ ಮಾಡಬೇಕು. ಎಸ್.ಎಂ.ಕೃಷ್ಣ ನಗರದ ಸಿ.ಐ.ಟಿ.ಬಿ. ವ್ಯಾಪ್ತಿಯಲ್ಲಿರುವ ಖಾಲಿ ಪ್ರದೇಶದ ನಿಗಧಿತ ಸ್ಥಳದಲ್ಲಿ ಮಾರಾಟ ಮಾಡಬೇಕು, ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು. ಸ್ವಚ್ಚತೆಗೆ ಕ್ರಮವಹಿಸಬೇಕು ಹಾಗೂ ಪ್ರವೇಶ ಮತ್ತು ನಿರ್ಗಮನ ದ್ವಾರದಲ್ಲಿ ಸಿ.ಸಿ.ಕ್ಯಾಮರ ಅಳವಡಿಸಬೇಕು ಎಂದು ತಿಳಿಸಿದರು.
ಪರವಾನಗಿ ಪಡೆಯದೆ ಕಾನೂನು ಬಾಹಿರವಾಗಿ ಪಟಾಕಿ ಮಾರಾಟ ಮಾಡುವುದು ಕಂಡುಬಂದಲ್ಲಿ ತಕ್ಷಣ ಪ್ರಕರಣ ದಾಖಲಿಸಿ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa