ನವದೆಹಲಿ, 08 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಇಂಡಿಯಾ ಮೊಬೈಲ್ ಕಾಂಗ್ರೆಸ್ 2025 ಅನ್ನು ಉದ್ಘಾಟಿಸಿ, ಇಂದು ಭಾರತವು ಹೂಡಿಕೆ ಮಾಡಲು, ನವೀನ ಆವಿಷ್ಕಾರಗಳನ್ನು ಮಾಡಲು ಮತ್ತು ಉತ್ಪಾದನೆಗೆ ಅತ್ಯುತ್ತಮ ಸ್ಥಳವಾಗಿದೆ ಎಂದು ಹೇಳಿದ್ದಾರೆ.
ನವದೆಹಲಿಯ ಯಶೋಭೂಮಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ಭಾರತದ ಪ್ರಜಾಪ್ರಭುತ್ವ ರಚನೆ, ಸರ್ಕಾರಿ ಸ್ನೇಹಿ ನೀತಿಗಳು ಹಾಗೂ ವ್ಯಾಪಾರಪರ ವಾತಾವರಣ ದೇಶವನ್ನು ವಿಶ್ವದ ಹೂಡಿಕೆ ಕೇಂದ್ರವಾಗಿ ರೂಪಿಸಿವೆ ಎಂದು ಹೇಳಿದರು.
ಇಂಡಿಯಾ ಮೊಬೈಲ್ ಕಾಂಗ್ರೆಸ್ ಈಗ ಕೇವಲ ಟೆಲಿಕಾಂ ವೇದಿಕೆಯಲ್ಲ, ಅದು ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಉತ್ಸವವಾಗಿದೆ. ಯುವಕರ ಮುನ್ನಡೆ ಮತ್ತು ನಾವೀನ್ಯತೆಯ ಚಿಂತನೆಯಿಂದ ಈ ವೇದಿಕೆ ರೂಪುಗೊಂಡಿದೆ ಎಂದರು.
ಅವರು ಟೆಲಿಕಾಂ ತಂತ್ರಜ್ಞಾನ ಅಭಿವೃದ್ಧಿ ನಿಧಿ, ಡಿಜಿಟಲ್ ಸಂವಹನ ನಾವೀನ್ಯತೆ ಚೌಕ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಸರ್ಕಾರವು ಹೊಸ ಆವಿಷ್ಕಾರಗಳಿಗೆ ಆರ್ಥಿಕ ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು.
ಮೊದಲು ಹೊಸ ತಂತ್ರಜ್ಞಾನಗಳು ಭಾರತಕ್ಕೆ ತಲುಪಲು ವರ್ಷಗಳೇ ಬೇಕಾಗುತ್ತಿತ್ತು, ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. 5G ಸೇವೆಗಳು ಈಗ ದೇಶದ ಪ್ರತಿಯೊಂದು ಜಿಲ್ಲೆಗೆ ತಲುಪಿವೆ, 2014ರೊಂದಿಗೆ ಹೋಲಿಸಿದರೆ, ಎಲೆಕ್ಟ್ರಾನಿಕ್ಸ್ ಉತ್ಪಾದನೆ ಆರು ಪಟ್ಟು, ಮೊಬೈಲ್ ಫೋನ್ ಉತ್ಪಾದನೆ 28 ಪಟ್ಟು, ಮತ್ತು ರಫ್ತು 127 ಪಟ್ಟು ಹೆಚ್ಚಾಗಿದೆ. ಭಾರತ ಈಗ ವಿಶ್ವದ ಎರಡನೇ ಅತಿದೊಡ್ಡ ದೂರಸಂಪರ್ಕ ಹಾಗೂ 5G ಮಾರುಕಟ್ಟೆ ಎಂದು ಮೋದಿ ಹೇಳಿದರು.
ದೂರಸಂಪರ್ಕ ಇಲಾಖೆ ಹಾಗೂ ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಯುಕ್ತವಾಗಿ ಆಯೋಜಿಸಿರುವ ಐಎಂಸಿ 2025, ಅಕ್ಟೋಬರ್ 8 ರಿಂದ 11ರವರೆಗೆ “ಇನ್ನೋವೇಟ್ ಟು ಟ್ರಾನ್ಸ್‌ಫಾರ್ಮ್” ಎಂಬ ವಿಷಯದ ಅಡಿಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ 1.5 ಲಕ್ಷಕ್ಕೂ ಹೆಚ್ಚು ಸಂದರ್ಶಕರು, 7,000 ಕ್ಕೂ ಹೆಚ್ಚು ಜಾಗತಿಕ ಪ್ರತಿನಿಧಿಗಳು, ಹಾಗೂ 150 ಕ್ಕೂ ಹೆಚ್ಚು ದೇಶಗಳಿಂದ 400 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa