ವಿಜಯಪುರ, 8 ಅಕ್ಟೋಬರ್ (ಹಿ.ಸ.)
ಆ್ಯಂಕರ್: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಕೆರೆ ಹಾಗೂ ತಡವಲಗಾ ಕ್ಯಾನಲ್‍ಗೆ ಬುಧವಾರ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊರ್ತಿ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕೆರೆ ಭರ್ತಿಯಾಗಿ ಏರಿ ಕುಸಿತ ಕಂಡ ಹಿನ್ನಲೆಯಲ್ಲಿ ರೈತರ ಹೊಲಗಳಿಗೆ ನೀರು ಹರಿದು ಬೆಳೆ ಹಾನಿ ಸೇರಿದಂತೆ ಹಾನಿಗೊಳಗಾದ ಪ್ರದೇಶವನ್ನು ಸಮೀಕ್ಷೆ ನಡೆಸಿ ವಿಪತ್ತು ಪರಿಹಾರ ನಿಧಿಯಡಿ ಪರಿಹಾರ ಒದಗಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಅಕ್ಟೋಬರ 2 ರಂದು ಹೆಚ್ಚಿನ ಪ್ರಮಾಣದ ಏರಿಯ ಕುಸಿತ ಕಂಡ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ ಹಾನಿ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಕೆರೆಯ ಕೋಡಿಯಿಂದ ಸುಮಾರು 30 ಮೀಟರ ದೂರದಲ್ಲಿ ಹಾಗೂ ಕುಸಿತ ಕಂಡುಬಂದ ಸ್ಥಳದಿಂದ 50 ಮೀಟರ ಅಂತರದಲ್ಲಿ ಕ್ರಮೇಣವಾಗಿ ನೀರನ್ನು ಹೊರಗೆ ಹಾಕಲು ಕೃತಕವಾಗಿ ಕೆರೆಯ ಏರಿಯಲ್ಲಿ ಚಾನಲ್ ನಿರ್ಮಾಣ ಮಾಡಿ ಈಗಾಗಲೇ ಹಂತ ಹಂತವಾಗಿ ನೀರನ್ನು ಹೊರಹಾಕಲಾಗಿದ್ದು, ಕುಸಿತ ಕಂಡ ಹೊರ್ತಿ ಕೆರೆ ದುರಸ್ತಿಗೆ ಸಂಬಂಧಿಸಿದಂತೆ ಸೂಕ್ತ ಕ್ರೀಯಾಯೋಜನೆಯನ್ನು ಸಿದ್ಧಪಡಿಸಿಕೊಂಡು ದುರಸ್ತಿ ಕಾಮಗಾರಿ ಕೈಗೊಂಡು ಯಾವುದೇ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಇಂಡಿ ಉಪವಿಭಾಗಾಧಿಕಾರಿ ಶ್ರೀಮತಿ ಅನುರಾಧಾ ವಸ್ತ್ರದ, ಇಂಡಿ ತಹಶೀಲ್ದಾರ ವಿಜಯಕುಮಾರ ಕಡಕಭಾವಿ, ಇಂಡಿ ಉಪ ವಿಭಾಗದ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಂದೀಪಕುಮಾರ, ಕೆಬಿಜೆಎನ್‍ಎಲ್ ಕಾರ್ಯನಿರ್ವಾಹಕ ಅಭಿಯಂತರ ಸೋನಾವಣೆ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande