ಕೊಪ್ಪಳ , 8 ಅಕ್ಟೋಬರ್ (ಹಿ.ಸ.)
ಆ್ಯಂಕರ್: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಕೊಪ್ಪಳ ಇವರು ಸ್ವಯಂ ಉದ್ಯೋಗ ಪ್ರಾರಂಭಿಸುವ ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವತಿಯರಿಗೆ ಮತ್ತು ಉದ್ಯಮ ಆಕಾಂಕ್ಷಿಗಳಿಗೆ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಕೆ ಅವಧಿಯನ್ನು ಅಕ್ಟೋಬರ್ 13 ರವರೆಗೆ ವಿಸ್ತರಿಸಲಾಗಿದೆ.
ಈ ತರಬೇತಿಯಲ್ಲಿ ಸ್ವಂತ ಉದ್ಯಮವನ್ನು ಸ್ಥಾಪಿಸಲು ಅನುಸರಿಸಬೇಕಾದ ಕ್ರಮಗಳು, ಸರ್ಕಾರದ ಸ್ವಂತ ಉದ್ಯೋಗದ ಯೋಜನೆಗಳು, ಬ್ಯಾಂಕಿನ ವ್ಯವಹಾರ, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕೆ ಹಾಗೂ ಉದ್ಯಮ ನಿರ್ವಹಣೆ, ಉದ್ಯಮಶೀಲತೆ, ಉದ್ಯಮ ಪ್ರಾರಂಭದ ಹಂತಗಳು, ಉದ್ಯಮಗಳನ್ನು ಪ್ರಾರಂಭಿಸಲು ಸರ್ಕಾರದ ಯೋಜನೆಗಳು, ಸಾಲ ಸೌಲಭ್ಯಗಳು, ಬ್ಯಾಂಕ್ ಬಗ್ಗೆ, ಜಾಹೀರಾತು ಮತ್ತು ಮಾರುಕಟ್ಟೆಯ ಕುರಿತು ನೋಂದಣಿ ಮಾಡುವ ವಿಧಾನಗಳು, ಯಶಸ್ವಿ ಉದ್ಯಮಿಗಳ ಜೊತೆ ಸಂವಾದ, ಉದ್ಯಮ ನಿರ್ವಹಣೆ ಮಾಡುವ ವಿಧಾನಗಳು ಮತ್ತು ಇತ್ಯಾದಿ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತಿದ್ದು, ಇದಕ್ಕಾಗಿ ಕೊಪ್ಪಳ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು 18 ರಿಂದ 45 ವರ್ಷ ವಯಸ್ಸಿನವರಾಗಿರಬೇಕು ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿರಬೇಕು. ಆಸಕ್ತರು ಅ.13 ರೊಳಗಾಗಿ ಅರ್ಜಿಯನ್ನು ಜಂಟಿ ನಿರ್ದೇಶಕರು, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿ ಆವರಣ, ನಗರಸಭೆ ಎದುರುಗಡೆ, ಕೊಪ್ಪಳ ಇಲ್ಲಿಗೆ ಸಲ್ಲಿಸಬೇಕು.
ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ರೇಶನ್ ಕಾರ್ಡ್‍ಗಳ ಝರಾಕ್ಸ್ ಪ್ರತಿಗಳು, 2 ಪಾಸ್‍ಪೋರ್ಟ್ ಫೋಟೋಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 7204016012 ಈ ನಂಬರಿಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಸಿಡಾಕ್‍ನ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್