ವಿಜಯಪುರ, 8 ಅಕ್ಟೋಬರ್ (ಹಿ.ಸ.)
ಆ್ಯಂಕರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗ ಜಿಲ್ಲಾಡಳಿತ ಹಾಗೂ ವಿಜಯಪುರ ರೋಟರಿ ಕ್ಲಬ್‍ನ ಇವರ ಸಹಯೋಗದಲ್ಲಿ ಪ್ರಯಾಣಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಉದ್ದೇಶದಿಂದ ಒಂದು ದಿನದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಅವರು ಮಾತನಾಡಿ, ವಿಭಾಗದ ಬಸ್ ನಿಲ್ದಾಣಗಳ ಸ್ವಚ್ಛತೆ ಹಾಗೂ ನಿಲ್ದಾಣದಲ್ಲಿ ಕುಡಿಯುವ ನೀರು, ಶೌಚಾಲಯಗಳ ಸಮರ್ಪಕ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಬಸ್‍ನಿಲ್ದಾಣಗಳ ಸ್ವಚ್ಛತೆ ಹಾಗೂ ಪ್ರಯಾಣಿಕ ಸ್ನೇಹಿ ಶೌಚಾಲಯ ನಿರ್ವಹಣೆಗಾಗಿ ಕಾರ್ಮಿಕ ಇಲಾಖೆಯಡಿ ನೋಂದಾಯಿತ ಗುತ್ತಿಗೆದಾರರಿಗೆ ಇ-ಟೆಂಡರ್ ಮೂಲಕ ಆಯ್ಕೆ ಮಾಡಿ ಪರವಾನಗಿ ನೀಡಲಾಗಿದೆ. ಪರವಾನಿಗೆದಾರರು ಪ್ರತಿನಿತ್ಯ ಬಸ್ ನಿಲ್ದಾಣ ಸ್ವಚ್ಛಗೊಳಿಸಿರುವುದನ್ನು ಪರಿಶೀಲಿಸಲು ಬಸ್ ನಿಲ್ದಾಣಗಳ ಸ್ವಚ್ಛತೆ ವಿಜಯಪುರ ವಿಭಾಗ ಎಂಬ ವಾಟ್ಸ್-ಅಪ್ ಗ್ರೂಪ್ ರಚಿಸಿಕೊಂಡು ಅಲ್ಲಿ ಪ್ರತಿ ದಿನ ಮೂರು ಬಾರಿ ಬಸ್ ನಿಲ್ದಾಣ ಸ್ವಚ್ಛಗೊಳಿಸಿರುವ ಕುರಿತಾಗಿ ಜಿಪಿಎಸ್ ಫೋಟೊ ಅಪ್‍ಲೋಡ್ ಮಾಡಲು ಸಿಬ್ಬಂದಿಗೆ ಸೂಚಿಸಲಾಗಿದೆ. ಸಂಸ್ಥೆಯ ಸಿಬ್ಬಂದಿಗಳು ಹಾಗೂ ಸ್ವಚ್ಛತಾ ಕಾರ್ಮಿಕರು ಪ್ರತಿದಿನ ಅಪಲೋಡ್ ಮಾಡಿದ ಪೋಟೊಗಳನ್ನು ಪರಿಶೀಲಿಸಿ ಬಸ್ ನಿಲ್ದಾಣಗಳನ್ನು ಸ್ವಚ್ಛವಾಗಿಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಬಸ್ ನಿಲ್ದಾಣದ ಪರಿವೀಕ್ಷಣಾ ಸಮಯದಲ್ಲಿ ಸ್ವಚ್ಛತೆಯ ಬಗ್ಗೆ ನ್ಯೂನ್ಯತೆಗಳನ್ನು ಕಂಡು ಬಂದಲ್ಲಿ ಸಂಬಂಧಪಟ್ಟ ಸ್ವಚ್ಛತಾ ಪರವಾನಿಗೆದಾರರಿಗೆ ನೋಟೀಸ್ ಜಾರಿ ಮಾಡುವುದಲ್ಲದೇ ದಂಡವನ್ನು ಸಹ ವಿಧಿಸಲು ಕ್ರಮವಹಿಸಲಾಗುವುದು. ಅದರಂತೆ ಇತ್ತೀಚಿಗೆ ಹೊಸದಾಗಿ ಆಯ್ಕೆಯಾದ ಸ್ವಚ್ಛತಾ ಪರವಾನಗೆದಾರರಿಗೆ ಆಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಸ್ವಚ್ಛತೆಗಾಗಿ ಉಪಯೋಗಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಕೆಲವು ಬಸ್ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಇಂಡಸ್ಟ್ರೀಯಲ್ ಫ್ಯಾನ್, ಘನ ತ್ಯಾಜ್ಯ ವಿಲೇವಾರಿಗಾಗಿ ಡಸ್ಟ್ ಬಿನ್‍ಗಳನ್ನು, ಮೊಬೈಲ್ ಚಾರ್ಜರ್ ಪಾಯಿಂಟ್ ಅಳವಡಿಸಲಾಗಿದ್ದು, ಮಹಿಳಾ ವಿಶ್ರಾಂತಿ ಕೊಠಡಿ ಹಾಗೂ ಹಾಲುಣಿಸುವ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದ ಅವರು ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಾರ್ವಜನಿಕರಿಗೆ ತಿಳಿಸಿದರು.
ರೋಟರಿ ಕ್ಲಬ್‍ನ ಅಧ್ಯಕ್ಷರಾದ ಪ್ರಾಣೇಶ ಜಹಾಗೀರದಾರ ಅವರು ಮಾತನಾಡಿ, ಸಾರ್ವಜನಿಕರು ನಿಲ್ದಾಣಗಳಲ್ಲಿ ಕಸ ಎಲ್ಲೆಂರೆಲ್ಲಿ ಎಸೆಯದೇ ಬಸ್ ನಿಲ್ದಾಣಗಳ ಆವರಣ ನಮ್ಮ ಆಸ್ತಿಯಂತೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದ ಅಧಿಕಾರಿ, ಸಿಬ್ಬಂದಿ, ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande