ನವದೆಹಲಿ, 08 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ವಾಯುಪಡೆಯ 93ನೇ ಸಂಸ್ಥಾಪನಾ ದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅನೇಕ ಗಣ್ಯರು ವಾಯು ಯೋಧರ ಧೈರ್ಯ, ಸಮರ್ಪಣೆ ಮತ್ತು ದೇಶಭಕ್ತಿಯನ್ನು ಶ್ಲಾಘಿಸಿ ಶುಭಾಶಯ ಕೋರಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ರಾಷ್ಟ್ರಪತಿ ಮುರ್ಮು ಅವರು, “ಭಾರತೀಯ ವಾಯುಪಡೆಯು ಸದಾ ಧೈರ್ಯ, ಸಮರ್ಪಣೆ ಮತ್ತು ಶ್ರೇಷ್ಠತೆಯ ಮಾದರಿಯಾಗಿದೆ. ಕಠಿಣ ಸಂದರ್ಭಗಳಲ್ಲಿಯೂ ರಾಷ್ಟ್ರಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವಾಯುಪಡೆ ಸಿಬ್ಬಂದಿಗೆ ನನ್ನ ಅಭಿನಂದನೆಗಳು,” ಎಂದು ಹೇಳಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ವಾಯುಪಡೆಯ ದಿನದಂದು ಸಂದೇಶ ನೀಡಿ, “ವಾಯುಪಡೆ ರಾಷ್ಟ್ರದ ಭದ್ರತೆಯ ಕವಚವಾಗಿದ್ದು, ನೈಸರ್ಗಿಕ ವಿಕೋಪಗಳ ಸಮಯದಲ್ಲಿಯೂ ಜನರ ರಕ್ಷಣೆಯಲ್ಲಿ ಸದಾ ಮುಂಚೂಣಿಯಲ್ಲಿದೆ,” ಎಂದು ಶ್ಲಾಘಿಸಿದರು. ಹುತಾತ್ಮ ವಾಯುಯೋಧರಿಗೆ ಅವರು ಗೌರವ ನಮನ ಸಲ್ಲಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ವಾಯುಪಡೆಯು ಧೈರ್ಯ, ವೃತ್ತಿಪರತೆ ಮತ್ತು ದೇಶಭಕ್ತಿಯ ಸಂಕೇತವಾಗಿದೆ ಎಂದು ಪ್ರಶಂಸಿಸಿ. “ರಾಷ್ಟ್ರಸೇವೆಗೆ ವಾಯುಪಡೆಯ ಅಪಾರ ಕೊಡುಗೆ ಸದಾ ಸ್ಮರಣೀಯ,” ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ತಮ್ಮ ಸಂದೇಶದಲ್ಲಿ, “ವಾಯುಪಡೆಯ ವೀರರ ಅದಮ್ಯ ಧೈರ್ಯ, ತ್ಯಾಗ ಮತ್ತು ಸಮರ್ಪಣೆ ರಾಷ್ಟ್ರಕ್ಕೆ ಶಾಶ್ವತ ಸ್ಫೂರ್ತಿ,” ಎಂದು ಬಣ್ಣಿಸಿದರು.
ಪ್ರತಿ ವರ್ಷ ಅಕ್ಟೋಬರ್ 8 ರಂದು ವಾಯುಪಡೆ ದಿನವನ್ನು ಆಚರಿಸಲಾಗುತ್ತದೆ. ಇದು 1932ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಸ್ಥಾಪಿತವಾದ ಭಾರತೀಯ ವಾಯುಪಡೆಯ ಸ್ಥಾಪನಾ ದಿನವನ್ನು ಸ್ಮರಿಸುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa