ಗದಗ, 05 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸರ್ಕಾರಿ ಶಿಕ್ಷಣ ಸಂಸ್ಥೆಯೊಳಗೆ ಖಾಸಗಿ ವ್ಯಕ್ತಿಗೆ ರಾಜಾತಿಥ್ಯ ನೀಡಿದ ಘಟನೆ ಜಿಲ್ಲೆಯ ಶಿಕ್ಷಣ ವಲಯವನ್ನು ಬೆಚ್ಚಿಬೀಳಿಸಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಒಡೆಯರಮಲ್ಲಾಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಯಾವುದೇ ಸರ್ಕಾರಿ ಅಧಿಕಾರಿಯೂ ಅಲ್ಲದ, ಜನಪ್ರತಿನಿಧಿಯೂ ಅಲ್ಲದ ಖಾಸಗಿ ವ್ಯಕ್ತಿಗೆ ವಿದ್ಯಾರ್ಥಿಗಳಿಂದ ಪುಷ್ಪವೃಷ್ಟಿ ಸ್ವಾಗತ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ವಿಜಯನಗರ ಜಿಲ್ಲೆಯ ಎಎಂಪಿ ವಾಗೀಶ್ ಎನ್ನುವ ಖಾಸಗಿ ವ್ಯಕ್ತಿ “ಮಾಹಿತಿ ಹಕ್ಕು ಸಂಪನ್ಮೂಲ ವ್ಯಕ್ತಿ” ಎಂದು ಹೇಳಿಕೊಂಡು ಶಾಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಶಾಲೆಯ ಮುಖ್ಯಶಿಕ್ಷಕರು ವಿದ್ಯಾರ್ಥಿಗಳಿಂದ ಹೂವಿನ ಮಳೆ ಸುರಿಸಲು ಸೂಚನೆ ನೀಡಿದ್ದು, ಸ್ವಾಗತ ಬೋರ್ಡ್ ಸಹ ಹಾಕಿಸಿದ್ದರು. ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ನಿಂತು ಪುಷ್ಪವೃಷ್ಟಿ ಮಾಡುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸರ್ಕಾರಿ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಇಂತಹ ಪ್ರದರ್ಶನಕ್ಕೆ ಬಳಸಿಕೊಂಡಿರುವ ಶಿಕ್ಷಕರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಶಿಕ್ಷಣ ಸಂಸ್ಥೆಯ ಗೌರವಕ್ಕೆ ಧಕ್ಕೆ ತಂದು, ಮಕ್ಕಳ ಹಕ್ಕು ಉಲ್ಲಂಘಿಸಿರುವುದಾಗಿ ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.
ಈ ಕುರಿತು ಹಾವೇರಿಯ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹುಬ್ಬಳ್ಳಿ ಅವರು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. ದೂರು ಹಿನ್ನೆಲೆಯಲ್ಲಿ ಇಲಾಖೆಯ ಸಹಾಯಕ ಆಯುಕ್ತ ಗಂಗಪ್ಪ ಅವರು ಮುಖ್ಯಶಿಕ್ಷಕ ನಾಗರಾಜ್ ಅವರಿಗೆ ನೋಟಿಸ್ ನೀಡಿದ್ದು, ವಿದ್ಯಾರ್ಥಿಗಳಿಂದ ಪುಷ್ಪವೃಷ್ಟಿ ಸ್ವಾಗತ ನೀಡಲು ಕಾರಣ ಕೇಳಿದ್ದಾರೆ.
ಮಾಹಿತಿ ತೃಪ್ತಿಕರವಾಗಿರದ ಹಿನ್ನೆಲೆಯಲ್ಲಿ, ಮುಖ್ಯಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗಿದೆ. ಇದೇ ವೇಳೆ ಖಾಸಗಿ ವ್ಯಕ್ತಿಗೆ ರಾಜಾತಿಥ್ಯ ನೀಡಿದ ರೀತಿಗೆ ಶಿಕ್ಷಣ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ವಿದ್ಯಾರ್ಥಿಗಳ ಬಳಕೆ ಸರಿಯಲ್ಲ, ನಾಗರಿಕರ ಆಕ್ರೋಶ
“ಮಕ್ಕಳನ್ನು ಶೈಕ್ಷಣಿಕ ಚಟುವಟಿಕೆಗೆ ಬದಲಾಗಿ ಪ್ರದರ್ಶನಕ್ಕೆ ಬಳಸುವುದು ನಾಚಿಕೆಗೇಡಿತನ. ಸರ್ಕಾರಿ ಶಾಲೆಯು ಇಂತಹ ನಡೆ ತೋರಿದರೆ ಉಳಿದವರಿಗೆ ಯಾವ ಸಂದೇಶ?” ಎಂದು ನಾಗರಿಕರು ಪ್ರಶ್ನಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಈಗಾಗಲೇ ಪ್ರಾಥಮಿಕ ತನಿಖೆ ಆರಂಭಿಸಿದ್ದು, ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಹಿಂದೂಸ್ತಾನ್ ಸಮಾಚಾರ್ / lalita MP