ನವದೆಹಲಿ, 05 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಕ್ಟೋಬರ್ 7ರಿಂದ 10ರವರೆಗೆ ಆಸ್ಟ್ರೇಲಿಯಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಇದು ಸುಮಾರು 12 ವರ್ಷಗಳ ಬಳಿಕ ಭಾರತೀಯ ರಕ್ಷಣಾ ಸಚಿವರು ಆಸ್ಟ್ರೇಲಿಯಾಕ್ಕೆ ನೀಡುತ್ತಿರುವ ಮೊದಲ ಭೇಟಿಯಾಗಿದೆ.
ಭಾರತ-ಆಸ್ಟ್ರೇಲಿಯಾ ರಕ್ಷಣಾ ಸಂಬಂಧಗಳನ್ನು ಬಲಪಡಿಸುವ ಹಾಗೂ ಕಾರ್ಯತಂತ್ರದ ಪಾಲುದಾರಿಕೆಯನ್ನು ವಿಸ್ತರಿಸುವ ಗುರಿಯನ್ನು ಈ ಭೇಟಿಯು ಹೊಂದಿದೆ. ಎರಡೂ ದೇಶಗಳು 2020ರಲ್ಲಿ ಸಮಗ್ರ ಕಾರ್ಯತಂತ್ರದ ಒಪ್ಪಂದ ಮತ್ತು 2021ರಲ್ಲಿ ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲ ಒಪ್ಪಂದ ಮಾಡಿಕೊಂಡಿದ್ದು, ನಂತರದಿಂದ ರಕ್ಷಣಾ ಸಹಕಾರ ವೈವಿಧ್ಯಗೊಂಡಿದೆ.
ಈ ವರ್ಷದ ಜೂನ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ ಆಸ್ಟ್ರೇಲಿಯಾದ ರಕ್ಷಣಾ ಸಚಿವ ಹಾಗೂ ಉಪ ಪ್ರಧಾನ ಮಂತ್ರಿ ರಿಚರ್ಡ್ ಮಾರ್ಲೆಸ್, ರಕ್ಷಣಾ, ಕೃತಕ ಬುದ್ಧಿಮತ್ತೆ ಮತ್ತು ಕಡಲ ಸಾಮರ್ಥ್ಯಗಳಲ್ಲಿ ಸಹಕಾರ ವಿಸ್ತರಣೆಗೆ ಭಾರತದೊಂದಿಗೆ ಒಪ್ಪಿಕೊಂಡಿದ್ದರು. ಆಗ ಭಾರತವು ಪಾಕಿಸ್ತಾನ ಸೇನೆಯೊಂದಿಗೆ ಸಂಪರ್ಕದ ವಿರುದ್ಧ ಆಸ್ಟ್ರೇಲಿಯಾಕ್ಕೆ ಎಚ್ಚರಿಕೆ ನೀಡಿತ್ತು.
ಭಾರತಕ್ಕೆ ಭೇಟಿ ನೀಡಿದಾಗ ಮಾರ್ಲೆಸ್ ಅವರು “ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ-ಆಸ್ಟ್ರೇಲಿಯಾ ಸಂಬಂಧಗಳು ಹೊಸ ಎತ್ತರಕ್ಕೆ ತಲುಪಿವೆ ಭಾರತ ನಮ್ಮ ಪ್ರಮುಖ ಕಾರ್ಯತಂತ್ರದ ಪಾಲುದಾರ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದರು.
ರಾಜನಾಥ್ ಸಿಂಗ್ ಅವರ ಈ ಪ್ರವಾಸದಲ್ಲಿ ಎರಡೂ ದೇಶಗಳು ಸಹ-ಉತ್ಪಾದನೆ, ತಂತ್ರಜ್ಞಾನ, ಎಐ ಮತ್ತು ಕಡಲ ಭದ್ರತೆ ಕ್ಷೇತ್ರಗಳಲ್ಲಿ ಮುಂದಿನ ಹಂತದ ಸಹಕಾರದ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa