ಬೆಂಗಳೂರು, 05 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಐಫೋನ್ ಮತ್ತು ಅದರ ಬಿಡಿಭಾಗಗಳ ತಯಾರಿಕೆಗೆ ಹೆಸರಾಗಿರುವ ಫಾಕ್ಸ್‌ಕಾನ್ ಕಂಪನಿಯ ಭಾರತದ ಮುಖ್ಯಸ್ಥ ರಾಬರ್ಟ್ ವೂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ, ಮತ್ತಷ್ಟು ಬಂಡವಾಳ ಹೂಡಿಕೆ ಮತ್ತಿತರ ಸಂಗತಿಗಳ ಬಗ್ಗೆ ಚರ್ಚಿಸಿದರು.
ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಈ ಭೇಟಿಯ ಸಂದರ್ಭದಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ ಎಚ್ ಮುನಿಯಪ್ಪ ಕೂಡ ಇದ್ದರು.
ವೂ ಅವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ʻಫಾಕ್ಸ್‌ಕಾನ್ ಕಂಪನಿಯು ದೇವನಹಳ್ಳಿಯ ತನ್ನ ಘಟಕದಲ್ಲಿ ಕೈಗಾರಿಕಾ ಚಟುವಟಿಕೆ ಆರಂಭಿಸಿರುವುದು ಒಳ್ಳೆಯದು. ಇನ್ನೂ ಘಟಕದ ವಿಸ್ತರಣೆಗೆ ಅಗತ್ಯ ಇರುವ ಎಲ್ಲ ರೀತಿಯ ಸಹಕಾರ ನೀಡಲಾಗುವುದು ʼ ಎಂದು ಭರವಸೆ ನೀಡಿದ್ದಾರೆ.
ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಾತನಾಡಿ, ದೇವನಹಳ್ಳಿಯಲ್ಲಿರುವ ಘಟಕವು ಫಾಕ್ಸ್‌ಕಾನ್ ಕಂಪನಿಯ ಎರಡನೇ ಅತಿದೊಡ್ಡ ಘಟಕವಾಗಿದೆ. ಆಪಲ್ ಕಂಪನಿಗೆ ಇದು ಜಾಗತಿಕ ಮಟ್ಟದಲ್ಲಿ ಮುಂಚೂಣಿ ಪೂರೈಕೆದಾರ ಸಂಸ್ಥೆಯಾಗಿದೆ. ದೇವನಹಳ್ಳಿಯಲ್ಲಿ ತಯಾರಾಗುವ ಐಫೋನ್‌ಗಳನ್ನು ಜಾಗತಿಕ ಸ್ತರದಲ್ಲಿ ರಫ್ತು ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಕಂಪನಿಯು ಇಲ್ಲಿ 22 ಸಾವಿರ ಕೋಟಿ ರೂ. ಹೂಡಿಕೆ ಮಾಡಿದೆ ಎಂದಿದ್ದಾರೆ.
ಈ ಭೇಟಿಯ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಮತ್ತು ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa