ಭೋಪಾಲ್, 05 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಧ್ಯ ಪ್ರದೇಶದ ಛಿಂದ್ವಾರ ಜಿಲ್ಲೆಯ ಪರಾಸಿಯಾ ಪ್ರದೇಶದಲ್ಲಿ ನಡೆದ ದಾರುಣ ಘಟನೆಯಲ್ಲಿ, ಕೆಮ್ಮಿನ ಸಿರಪ್ ಸೇವಿಸಿದ 11 ಮಕ್ಕಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ತಜ್ಞ ಡಾ. ಪ್ರವೀಣ್ ಸೋನಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಸಿರಪ್ ತಯಾರಿಸಿದ ತಮಿಳುನಾಡಿನ ಕಾಂಚಿಪುರಂನ ಶ್ರೀಸನ್ ಫಾರ್ಮಾಸ್ಯುಟಿಕಲ್ ಕಂಪನಿ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಮಧ್ಯಪ್ರದೇಶ ಆರೋಗ್ಯ ಇಲಾಖೆಯ ಬಿಎಂಒ ಡಾ. ಅಂಕಿತ್ ಸಲಾಂ ಅವರ ದೂರಿನ ಮೇರೆಗೆ, ಪೊಲೀಸರು ಬಿಎನ್‌ಎಸ್ ಸೆಕ್ಷನ್ 276 (ಔಷಧಿಗಳ ಕಲಬೆರಕೆ), 105(3) (ಶಿಕ್ಷಾರ್ಹ ನರಹತ್ಯೆ) ಹಾಗೂ ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆಕ್ಟ್‌ನ ಸೆಕ್ಷನ್ 27(ಎ)(iii) ಮತ್ತು 26 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ 10 ವರ್ಷದಿಂದ ಜೀವಾವಧಿ ಶಿಕ್ಷೆಯವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ.
ಪರೀಕ್ಷೆಗಾಗಿ ತಮಿಳುನಾಡಿನಿಂದ ತರಿಸಲಾದ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಮಾದರಿಗಳಲ್ಲಿ ಡೈಥಿಲೀನ್ ಗ್ಲೈಕೋಲ್‌ನ ಅಪಾಯಕಾರಿ ಪ್ರಮಾಣ ದೃಢಪಟ್ಟಿದ್ದು, ಅದೇ ಮೂಲದಿಂದ ಈ ದುರಂತ ಉಂಟಾಗಿದೆ ಎಂಬುದು ಪ್ರಾಥಮಿಕ ವರದಿಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa