ಕೋಲ್ಕತ್ತಾ, 05 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಬಂಗಾಳದ ದಾರ್ಜಿಲಿಂಗ್ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಭೂಕುಸಿತಗಳು ಸಂಭವಿಸಿ, ಸೇತುವೆ ಕುಸಿತಗೊಂಡ ಪರಿಣಾಮ ಆರು ಮಂದಿ ಮೃತಪಟ್ಟಿದ್ದಾರೆ. ಅನೇಕ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸ್ಥಳೀಯ ಜನತೆ ಸಂಪೂರ್ಣವಾಗಿ ಹೊರ ಜಗತ್ತಿನಿಂದ ಸಂಪರ್ಕ ಕಳೆದುಕೊಂಡಿದ್ದಾರೆ.
ಮಿರಿಕ್ ಉಪವಿಭಾಗದ ದುದಿಯಾ ಕಬ್ಬಿಣದ ಸೇತುವೆ ಭಾರಿ ಮಳೆಯಿಂದ ಕುಸಿದಿದ್ದು, ಮಿರಿಕ್–ಕರ್ಸಿಯಾಂಗ್ ಮುಖ್ಯ ರಸ್ತೆ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಈ ಸೇತುವೆ ಕುಸಿತದಿಂದ ಹಲವಾರು ವಾಹನಗಳು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ.
ಇದೇ ವೇಳೆ, ಕರ್ಸಿಯಾಂಗ್ ಸಮೀಪದ ರಾಷ್ಟ್ರೀಯ ಹೆದ್ದಾರಿ–110 ಪ್ರದೇಶದಲ್ಲಿಯೂ ಭೂಕುಸಿತ ಸಂಭವಿಸಿದ್ದು, ಹುಸೇನ್ ಖೋಲಾ ಬಳಿ ರಸ್ತೆ ಭಾಗ ಸಂಪೂರ್ಣವಾಗಿ ಕುಸಿದಿದೆ. ಇದರಿಂದ ದಾರ್ಜಿಲಿಂಗ್, ಕಲಿಂಪಾಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಸರಕು ಹಾಗೂ ಆಹಾರ ಸಾಮಗ್ರಿಗಳ ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಅಧಿಕೃತ ವರದಿಗಳ ಪ್ರಕಾರ, ಮಿರಿಕ್ ಪಟ್ಟಣದ ಹೊರವಲಯದಲ್ಲಿ ಭೂಕುಸಿತವಾದ ಪರಿಣಾಮ ಮೂರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಮೂವರು ಕರ್ಸಿಯಾಂಗ್ ಮತ್ತು ದಾರ್ಜಿಲಿಂಗ್ ಪ್ರದೇಶಗಳಲ್ಲಿ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ.
ಭಾರಿ ಮಳೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ದಾರ್ಜಿಲಿಂಗ್, ಕಲಿಂಪಾಂಗ್ ಹಾಗೂ ಸಿಕ್ಕಿಂ ಸುತ್ತಮುತ್ತ ಕಿತ್ತಳೆ ಎಚ್ಚರಿಕೆ ಘೋಷಿಸಿದೆ. ಮುಂದಿನ 24 ಗಂಟೆಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa