
ಏಕತಾನಗರ, 31 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರದ ಏಕತೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಗುರಿ ಸಾಧಿಸಲು ದೇಶವನ್ನು ವಿಭಜಿಸಲು ಪ್ರಯತ್ನಿಸುವ ಪ್ರತಿಯೊಂದು ಪಿತೂರಿಯನ್ನು ವಿಫಲಗೊಳಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ಗುಜರಾತಿನ ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿನದ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾಷೆ, ಸಂಸ್ಕೃತಿ, ಸಂಪರ್ಕ ಮತ್ತು ತಾರತಮ್ಯ ಮುಕ್ತ ಅಭಿವೃದ್ಧಿ ಭಾರತದ ಏಕತೆಯ ನಾಲ್ಕು ಸ್ತಂಭಗಳು. ಒಳನುಸುಳುವಿಕೆ ದೇಶದ ಏಕತೆಗೆ ಗಂಭೀರ ಬೆದರಿಕೆ ಎಂದು ಅವರು ಎಚ್ಚರಿಸಿದರು ಮತ್ತು “ಜನಸಂಖ್ಯಾ ಮಿಷನ್” ಮೂಲಕ ಸರ್ಕಾರ ಅದನ್ನು ನಿಭಾಯಿಸುತ್ತಿದೆ ಎಂದು ಹೇಳಿದರು.
ವಂದೇ ಮಾತರಂನ ಕೆಲವು ಭಾಗಗಳನ್ನು ತೆಗೆದುಹಾಕಿದ ಕಾಂಗ್ರೆಸ್ ನಿರ್ಧಾರ ರಾಷ್ಟ್ರದ ಏಕತೆಗೆ ವಿರುದ್ಧ ಎಂದು ಅವರು ಟೀಕಿಸಿದರು. “ಕಾಂಗ್ರೆಸ್ ಗುಲಾಮ ಮನೋಭಾವದ ಆಡಳಿತವನ್ನು ಮುಂದುವರಿಸಿದೆ,” ಎಂದು ಪ್ರಧಾನಿ ಆರೋಪಿಸಿದರು.
ಧಾರಾ 370 ರದ್ದುಪಡಿಸಿದ ನಂತರ ಕಾಶ್ಮೀರ ಮುಖ್ಯವಾಹಿನಿಗೆ ಬಂದಿದ್ದು, ನಕ್ಸಲ್ ಮತ್ತು ಮಾವೋವಾದಿ ಭಯೋತ್ಪಾದನೆ ವಿರುದ್ಧ ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಮೋದಿ ಹೇಳಿದರು. ಪಟೇಲ್ 550ಕ್ಕೂ ಹೆಚ್ಚು ರಾಜಪ್ರಭುತ್ವ ರಾಜ್ಯಗಳನ್ನು ವಿಲೀನಗೊಳಿಸಿ “ಒಂದು ಭಾರತ, ಶ್ರೇಷ್ಠ ಭಾರತ”ದ ಕನಸನ್ನು ನನಸಾಗಿಸಿದರು, ಆದರೆ ನಂತರದ ಸರ್ಕಾರಗಳು ಅವರ ದೃಷ್ಟಿಯನ್ನು ಮರೆತವು ಎಂದು ಹೇಳಿದರು.
ಸಮಾರಂಭದಲ್ಲಿ ಬಿಎಸ್‌ಎಫ್, ಸಿಆರ್‌ಪಿಎಫ್ ಪಡೆಗಳ ಮೆರವಣಿಗೆ, ಶೌರ್ಯ ಪ್ರಶಸ್ತಿ ವಿತರಣೆಯ ಜೊತೆಗೆ “ವೈವಿಧ್ಯತೆಯಲ್ಲಿ ಏಕತೆ” ವಿಷಯದ ಮೇಲೆ ಹತ್ತು ರಾಜ್ಯಗಳ ಟ್ಯಾಬ್ಲೋ ಪ್ರದರ್ಶನ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa