
ನವದೆಹಲಿ, 31 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಚೀನಾ ಗಡಿಯಿಂದ ಕೇವಲ 50 ಕಿಲೋಮೀಟರ್ ದೂರದಲ್ಲಿರುವ ಪೂರ್ವ ಲಡಾಖ್‌ನ ನ್ಯೋಮಾ ವಾಯುನೆಲೆಯನ್ನು ಶುಕ್ರವಾರ ಉದ್ಘಾಟಿಸುವ ಮೂಲಕ ಭಾರತ ವಿಶ್ವದ ಅತಿ ಎತ್ತರದ ವಾಯುನೆಲೆಯ ಮಾಲೀಕನಾಗಿದೆ. ಸಮುದ್ರಮಟ್ಟದಿಂದ 13,700 ಅಡಿ ಎತ್ತರದಲ್ಲಿ ನಿರ್ಮಿಸಲಾದ ಈ ವಾಯುನೆಲೆಯು ರಾಷ್ಟ್ರರಕ್ಷಣಾ ದೃಷ್ಟಿಯಿಂದ ಮಹತ್ವದ ತಂತ್ರಜ್ಞಾನ ಹೂಡಿಕೆಯಾಗಿದ್ದು, ಇದು ಭಾರತದ ಗಗನ ಶಕ್ತಿಗೆ ಹೊಸ ಬಲ ನೀಡಲಿದೆ.
ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಿರುವ ಈ ನ್ಯೋಮಾ ಅಡ್ವಾನ್ಸ್‌ಡ್ ಲ್ಯಾಂಡಿಂಗ್ ಗ್ರೌಂಡ್‌ನಲ್ಲಿ ಈಗ MiG-29 ಮತ್ತು ಸುಖೋಯ್-30 MKI ಯುದ್ಧ ವಿಮಾನಗಳು ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ. ವಾಸ್ತವಿಕ ನಿಯಂತ್ರಣ ರೇಖೆಯಿಂದ ಕೇವಲ 50 ಕಿಮೀ ದೂರದಲ್ಲಿರುವ ಈ ನೆಲೆಯು ಚೀನಾದ ಕ್ಸಿನ್‌ಜಿಯಾಂಗ್ ಮಿಲಿಟರಿ ಪ್ರದೇಶ ಮತ್ತು ಪಾಕಿಸ್ತಾನದ ಉತ್ತರ ಪ್ರದೇಶಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಗೆ ಭಾರತ ಬಲವಾದ ಪ್ರತಿಕ್ರಿಯೆ ನೀಡಲು ಸಹಾಯಕವಾಗಲಿದೆ.
ಭಾರತವು ಈ ಹಿಂದೆ ದೌಲತ್ ಬೇಗ್ ಓಲ್ಡಿ ಯಲ್ಲಿ 16,600 ಅಡಿ ಎತ್ತರದಲ್ಲಿ ವಾಯುನೆಲೆಯನ್ನು ನಿರ್ಮಿಸಿದ್ದರೂ, ಅದು ಹವಾಮಾನ ಮತ್ತು ಕಾರ್ಯತಂತ್ರದ ಅಂಶಗಳಿಂದಾಗಿ ನಿರ್ಬಂಧಿತವಾಗಿತ್ತು. ಲೇಹ್ ಮತ್ತು ಥೋಯಿಸ್ ನೆಲೆಗಳು ಹವಾಮಾನ ಕಾರಣದಿಂದ ಅಲ್ಪಾವಧಿಗೆ ಮಾತ್ರ ಬಳಸಬಹುದಾದ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ, ನ್ಯೋಮಾವನ್ನು ಶಾಶ್ವತ ಪರ್ಯಾಯವಾಗಿ ಆಯ್ಕೆ ಮಾಡಲಾಗಿದೆ.
ಪ್ರಕೃತಿಯು ನೀಡಿದ ಸವಾಲುಗಳ ನಡುವೆಯೂ, BRO 2.7 ಕಿಲೋಮೀಟರ್ ಉದ್ದದ ಕಾಂಕ್ರೀಟ್ ರನ್‌ವೇ ನಿರ್ಮಿಸಿ ಕಾರ್ಯಾಚರಣೆಗೆ ತಕ್ಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ಭಾರೀ ಸಾರಿಗೆ ವಿಮಾನಗಳು ಸಹ ನ್ಯೋಮಾದಿಂದ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ.
ನ್ಯೋಮಾ ಪ್ರದೇಶವು ಚಾಂಗ್‌ಥಾಂಗ್ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿರುವುದರಿಂದ, ಪರಿಸರ ಅನುಮತಿಯ ಸವಾಲು ಎದುರಿಸಬೇಕಾಯಿತು. ಆದರೆ, ಭಾರತೀಯ ವಾಯುಪಡೆಯು ಶರತ್ತುಗಳನ್ನು ಪೂರೈಸುವ ರೀತಿಯಲ್ಲಿ ಯೋಜನೆಯನ್ನು ಪರಿಷ್ಕರಿಸಿದ ನಂತರ, ವಾಯುನೆಲೆಯ ಅಭಿವೃದ್ಧಿಗೆ ಅಂತಿಮ ಅನುಮತಿ ದೊರೆತಿದೆ.
ರಕ್ಷಣಾ ಸಚಿವಾಲಯದ ಪ್ರಕಾರ, ನ್ಯೋಮಾ ವಾಯುನೆಲೆಯು ವಿಶ್ವದ ಅತಿ ಎತ್ತರದ ಕಾರ್ಯಾಚರಣಾ ವಾಯುನೆಲೆಯಾಗಿ ದಾಖಲೆ ನಿರ್ಮಿಸಿದೆ. ಇದು ಕೇವಲ ತಾಂತ್ರಿಕ ಸಾಧನೆಯಲ್ಲ, ಹಿಮಾಲಯದ ಗಡಿಯಲ್ಲಿ ಭಾರತದ ಅಜೇಯತೆಯ ಪ್ರತೀಕವಾಗಿದೆ.
2020ರಲ್ಲಿ ಚೀನಾದೊಂದಿಗಿನ ಗಡಿ ಬಿಕ್ಕಟ್ಟಿನ ಸಮಯದಲ್ಲಿ, ಈ ನೆಲೆಯು ಈಗಾಗಲೇ C-130J ಸೂಪರ್ ಹರ್ಕ್ಯುಲಸ್, AN-32 ವಿಮಾನಗಳು, Mi-17 ಹಾಗೂ ಚಿನೂಕ್ ಹೆಲಿಕಾಪ್ಟರ್‌ಗಳ ಇಳಿಯುವಿಕೆಗೆ ಸಾಕ್ಷಿಯಾಗಿದೆ. ಇದೀಗ ಯುದ್ಧ ವಿಮಾನಗಳಿಗೂ ಸಜ್ಜಾಗಿರುವ ನ್ಯೋಮಾ ವಾಯುನೆಲೆಯು ಭಾರತಕ್ಕೆ ಗಗನಸಮ ರಕ್ಷಣಾ ಸಾಮರ್ಥ್ಯ ಒದಗಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa