ಬಳ್ಳಾರಿ, 03 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ `ಸುಂಕ ದೌರ್ಜನ್ಯ ದಿಕ್ಕರಿಸಿ' ರೈತ-ಕಾರ್ಮಿಕರ ಜಿಲ್ಲಾಮಟ್ಟದ ಜಂಟಿ ಸಮಾವೇಶ ಬಳ್ಳಾರಿಯ ಗಾಂಧಿಭವನದಲ್ಲಿ ಅಕ್ಟೋಬರ್ 13ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಸಮಾವೇಶ ನಡೆಯಲಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು. ಬಸವರಾಜ್ ಅವರು ತಿಳಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರು ಭಾರತ ಸೇರಿ ಜಗತ್ತಿನ ವಿವಿಧ ದೇಶಗಳ ಮೇಲೆ ಸುಂಕ ಹೆಚ್ಚಿಸಿ, ಆರ್ಥಿಕ ಸ್ಥಿತಿಯ ಏರುಪೇರು ಮತ್ತು ರಪ್ತುದಾರರಲ್ಲಿ ಸಂಕಷ್ಟಗಳನ್ನು ಸೃಷ್ಟಿಸಿ ಅರಾಜಕತೆಯನ್ನು ಮೂಡಿಸುತ್ತಿದ್ದಾರೆ ಎಂದರು.
ಟ್ರಂಪ್‍ನ ಸುಂಕ ನೀತಿಯಿಂದಾಗಿ ಭಾರತದ ಕೃಷಿ ಹಾಗು ಕೈಗಾರಿಕಾ ಉತ್ಪನ್ನಗಳ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸ ಆಗಲಿದೆ. ಅನೇಕರು ನಿರುದ್ಯೋಗಿಗಳಾಗುವ - ಆರ್ಥಿಕವಾಗಿ ದಿವಾಳಿಯಾಗುವ ಅಥವಾ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಸವಾಲುಗಳು ಸೃಷ್ಟಿಯಾಗುವ ಅಪಾಯಕಾರಿ ಸಂದರ್ಭಗಳಿವೆ. ಕಾರಣ ಟ್ರಂಪ್‍ನ ಸುಂಕ ಹೆಚ್ಚಳ ದೌರ್ಜನ್ಯವನ್ನು ಖಂಡಿಸಿ ಸಮಾವೇಶ ನಡೆಯಲಿದೆ ಎಂದರು.
ಸಂಘಟನೆಗಳ ಹೋರಾಟಗಾರರಾದ ಜೆ. ಸತ್ಯಬಾಬು, ವಿ.ಎಸ್. ಶಿವಶಂಕರ್, ಜೆ.ಎಂ. ಚನ್ನಬಸಯ್ಯ, ತಿಪ್ಪೇಸ್ವಾಮಿ ಸೇರಿ ಅನೇಕರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್