ಮರಿಯಮ್ಮನಹಳ್ಳಿ, 03 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯೆ ಹಾಗೂ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕತೆ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದೆ ಡಿ. ಹನುಮಕ್ಕ (58) ಅವರು ಶುಕ್ರವಾರ ಬೆಳಿಗ್ಗೆ ನಿಧನ ಹೊಂದಿದರು.
ಮರಿಯಮ್ಮನಹಳ್ಳಿಯ ಖ್ಯಾತ ವೃತ್ತಿ ರಂಗಭೂಮಿ ಕಲಾವಿದ ಡಿ. ದುರ್ಗಾದಾಸ್ ಮತ್ತು ಡಿ. ಪಾರ್ವತಮ್ಮ ಅವರ ನಾಲ್ಕು ಜನ ಮಕ್ಕಳಲ್ಲಿ ಕೊನೆಯ ಪುತ್ರಿಯಾಗಿ 17-11-1967 ರಲ್ಲಿ ಡಿ. ಹನುಮಕ್ಕ ಜನಿಸಿದ್ದು, ಇವರ ಮನೆತನಕ್ಕೆ ಕಲೆ ವಂಶಪರಂಪರೆಯಾಗಿ ಬಂದಿದ್ದು, ಇವರ ದೊಡ್ಡಪ್ಪ, ಚಿಕ್ಕಪ್ಪ, ಸೋದರ ಸಂಬಧಿಗಳು ಎಲ್ಲರೂ ರಂಗಭೂಮಿಯ ನಂಟನ್ನು ಹೊಂದಿದ್ದವರು. ಹೀಗಾಗಿ ರಂಗಭೂಮಿ ನಂಟು ಹನುಮಕ್ಕನವರಿಗೂ ರಕ್ತದಲ್ಲೇ ಇದೆ ಎನ್ನುವುದು ಉತ್ಪ್ರೇಕ್ಷೆಯಲ್ಲ.
ಹನುಮಕ್ಕನ ಅಪ್ಪ ದುರ್ಗಾದಾಸ ನೋಟದಲ್ಲಿ ಸುರಸುಂದರ, ರಂಗಭೂಮಿಯಲ್ಲಿ ನಟಶೇಖರಾಗಿದ್ದರು. ಅವರ ನಾಲ್ಕು ಮಕ್ಕಳಲ್ಲಿ ಕೊನೆಯವರು ಹನುಮಕ್ಕ. ’ನೀ ಗಂಡಾಗಿ ಹುಟ್ಟಬೇಕಿತ್ತು ನೋಡು’ ಅಂತಿದ್ದ ಅಪ್ಪನಿಗೆ ’ಅಭಿನಯದಲ್ಲಿಯೇ... ನಿನ್ನ ಆಸೆ ತೀರಿಸೀನಿ’ ಅಂದವರು ಹನುಮಕ್ಕ.
ಹನುಮಕ್ಕನವರಿಗೆ ರಂಗಭೂಮಿಯ ಗೀಳು ಬಾಲ್ಯದಿಂದಲೂ ಇತ್ತು. 9ನೇ ತಗತಿಯವರೆಗೆ ಓದಿದ್ದು, ತನ್ನ ತಂದೆಯಂತೆ ರಂಗಭೂಮಿಯಲ್ಲಿ ತೊಡಗಿಕೊಳ್ಳಬೇಕೆಂಬ ಹಂಬಲದಿಂದ ಇದಕ್ಕೊಂದು ಶಿಸ್ತಿನ ರೂಪ ತಂದುಕೊಳ್ಳಬೇಕೆಂಬ ಹಂಬಲದಿಂದ ಇವರು ರಂಗಭೂಮಿಯ ಹೆಚ್ಚಿನ ಅಧ್ಯಯನಕ್ಕೆ ಹೆಗ್ಗೋಡಿನ ಪ್ರಖ್ಯಾತ ಸಂಸ್ಥೆಯಾದ ನೀನಾಸಂಗೆ 1994 ರಲ್ಲಿ ಸೇರಿ, ಅಲ್ಲಿ ನಾಟಕ ಕಲೆಯ ಎಲ್ಲಾ ಆಯಾಮಗಳನ್ನು ಕಲಿತು ಪ್ರತಿಭಾವಂತ ಕಲಾವಿದೆಯಾಗಿ ಗುರುತಿಸಿಕೊಂಡಿದ್ದರು.
ನೀನಾಸಂನಲ್ಲಿ ಕೆ.ವಿ. ಸುಬ್ಬಣ್ಣ, ಕೆ.ವಿ. ಅಕ್ಷರ, ಚಿದಂಬರರಾವ್ ಜಂಬೆ, ಸಿ.ಜಿ.ಕೆ., ಸಿ. ಬಸವಲಿಂಗಯ್ಯ, ಬಿ.ವಿ. ಕಾರಂತ, ಕಿ.ರಂ. ನಾಗರಾಜ, ಕೀರ್ತೀನಾಥ ಕುರ್ತುಕೋಟಿ, ಯು.ಆರ್. ಅನಂತಮೂರ್ತಿ, ಮೇಕಪ್ ನಾಣಿ, ಹುಲುಗಪ್ಪ ಕಟ್ಟಿಮನಿ, ಅಲೆಮನೆ ಸುಂದರಮೂರ್ತಿ, ಮಾಲತೇಶ ಬಡಿಗೇರ್, ವೆಂಕಟರಮಣ ಐತಾಳ, ಸುರೇಶ್ ಆನಗಳ್ಳಿ, ಕೃಷ್ಣಕುಮಾರ್ ಯಾದವ್, ಪ್ರಮೋದ್ ಶಿಗ್ಗಾಂವ್, ಇಕ್ಬಲ್ ಅಹಮ್ಮದ್ ಸೇರಿದಂತೆ ಅನೇಕ ರಂಗಭೂಮಿಯ ದಿಗ್ಗಜರೊಡನೆ ಒಡನಾಟ ಹಾಗೂ ಘಟಾನುಘಟಿ ನಿರ್ದೇಶಕರು ನಿರ್ದೇಶಿಸಿರುವ ನಾಟಕಗಳಲ್ಲೂ ಉತ್ತಮ ಕಲಾವಿದೆಯಾಗಿ ಮಿಂಚಿದ್ದಾರೆ.
ನೀನಾಸಂ ಹಾಗೂ ಶಿವಸಂಚಾರ ತಂಡಗಳ ತಿರುಗಾಟದಿಂದಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದು, ಪಂಚರಾತ್ರ, ತುಘಲಕ್, ವೆನಿಸಿನ ವರ್ತಕ, ಅಗ್ನಿ ಮತ್ತು ಮಳೆ, ಮಾಮ ಮೋಶಿ, ಮೀಡಿಯಾ, ಚಿರೆ ಬಂದೆ ವಾಡೆ, ಜೊತೆಗಿರುವನು ಚಂದಿರ, ಸ್ಮಶಾನ ಕುರುಕ್ಷೇತ್ರ, ಚಾಳೇಶ, ನೀರು, ಬೇಲಿ ಮತ್ತು ಹೊಲ, ಜೋಕುಮಾರಸ್ವಾಮಿ, ಜಂಗದಡೆಗೆ, ಬೆರಳ್‍ಗೆ ಕೊರಳ್, ಷರೀಫ, ಒಡಲಾಳ, ನಾಗಮಂಡಲ, ದಿವ್ಯಾಂಬರಿ, ವಧೂಟಿ, ಮುಕ್ತಧಾರ, ಮಾದರ ಚೆನ್ನಯ್ಯ, ಸೂರ್ಯಶಿಕಾರಿ, ರೂಪದರ್ಶಿ, ಕಾಟಮಲ್ಲ, ಆಳು, ಒಳಸುಳಿಗಳು, ಸೇವಂತಿ ಪ್ರಸಂಗ, ಜೋಗತಿ ಕಲ್ಲು, ಮನ್ವಂತರ, ಸಂಗೊಳ್ಳಿ ರಾಯಣ್ಣ, ಜನಗಣಮನ, ಮಾರನಾಯಕ, ಗಾಂಧಿಬಂದ, ಮೈಮನಗಳ ಸುಳಿಯಲ್ಲಿ, ಏಕಲವ್ಯ, ಸಂಪತ್ತಿಗೆ ಸವಾಲು, ಮೌನಕೋಗಿಲೆ ಸೇರಿದಂತೆ ನೂರಾರು ನಾಟಕಗಳಲ್ಲಿ ಅಭಿನಯಿಸಿ ಉತ್ತಮ ಕಲಾವಿದೆಯಾಗಿ ಹೆಸರು ಸಂಪಾಧಿಸಿದ್ದಾರೆ.
ಹೆಸರು ತಂದುಕೊಟ್ಟ ನಾಟಕಗಳು
ಬೆರಳ್‍ಗೆ ಕೊರಳ್ ನಾಟಕದಲ್ಲಿ ದ್ರೋಣಾಚಾರ್ಯ, ಷರೀಫದಲ್ಲಿ ಗೋವಿಂದಭಟ್ಟ, ಒಡಲಾಳದಲ್ಲಿ ಸಾಕವ್ವ, ನಾಗಮಂಡಲದಲ್ಲಿ ಕುರುಡವ್ವ, ಸ್ಮಶಾನ ಕುರುಕ್ಷೇತ್ರದಲ್ಲಿ ಅಜ್ಜಿ ಪಾತ್ರ ಸೇರಿದಂತೆ ಅನೇಕ ನಾಟಕಗಳಲ್ಲಿ ಸೈ ಎನ್ನಿಸಿಕೊಳ್ಳುವಂತೆ ಅಭಿನಯಿಸುತ್ತಿದ್ದರು.
ನೀನಾಸಂ, ಶಿವಸಂಚಾರ, ರಂಗ ನಿರಂತರ, ಶಿವರಂಗ, ರಂಗ ಸುಗ್ಗಿ ಟ್ರಸ್ಟ್, ರೂಪಾಂತರ, ರಂಗಮಂಟಪ, ಟಿ.ಬಿ. ಡ್ಯಾಂನ ಕನ್ನಡ ಕಲಾಸಂಘ, ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ, ರಂಗ ಬುಗುಡಿದಂಗಳ, ರಂಗ ಪರಂಪರೆ ಟ್ರಸ್ಟ್ ಸೇರಿದಂತೆ ಅನೇಕ ಹವ್ಯಾಸಿ ರಂಗ ತಂಡಗಳಲ್ಲಿ ಅಭಿಯಿಸಿ ರಂಗಭೂಮಿ ಸೇವೆ ಸಲ್ಲಿಸುತ್ತಿದ್ದರು.
‘ಪ್ರಶಸ್ತಿ‘
2017ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಮುಂಬೈ ಕನ್ನಡ ಕಲಾ ಸಂಘ ಸ್ಪರ್ಧೆಯಲ್ಲಿ ಮತ್ತು ರಾಜ್ಯ ನಾಟಕ ಸ್ಪರ್ಧೆಯಲ್ಲಿ ಎರಡು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ, ಕನ್ನಡ ಕಲಾ ಸಂಘದ ಟಿ.ಪಿ.ಕೈಲಾಸಂ ಪ್ರಶಸ್ತಿ, ಕೊಟ್ಟೂರು ಮತ್ತು ಕೂಡ್ಲಿಗಿಯಲ್ಲಿ ರಂಗ ಗೌರವ, ಇವರ ತಂದೆಗೆ 1980 ರಲ್ಲಿ ತಂದೆ ದುರ್ಗಾದಾಸ್ ಅವರಿಗೆ 2017ರಲ್ಲಿ ಹನುಮಕ್ಕ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸುವ ಮೂಲಕ ತಂದೆ-ಮಗಳಿಗೂ ನಾಟಕ ಅಕಾಡಮೆ ಪ್ರಶಸ್ತಿ ಪಡೆದ ಅಪರೂಪದ ರಂಗ ಕುಟುಂಬವಾಗಿದೆ.
ನಾನೆಂದೂ ಪಾತ್ರಗಳನ್ನು ತಿರಸ್ಕರಿಸಿದವಳಲ್ಲ, ಶ್ರದ್ಧಾ, ಭಕ್ತಿಯಿಂದ ರಂಗಸೇವೆ ಮಾಡುವುದμÉ್ಟೀ ನನ್ನ ಕೆಲಸ. ಅಪ್ಪನಷ್ಟು ಶ್ರೇಷ್ಠತೆ ಪಡೆಯುವುದು ಅಸಾಧ್ಯವೆಂಬ ಸತ್ಯ ನನಗೆ ಗೊತ್ತಿದ್ದೂ, ಅಪ್ಪ ನನ್ನೊಳಗೆ ಇಳಿದು ಬಂದಾನ... ಎನ್ನೋ ನಂಬಿಕೆಯಿಂದ ರಂಗಭೂಮಿಯಲ್ಲಿ ಬಾಳಿದ ಹನುಮಕ್ಕ.
‘ಚಲನಚಿತ್ರದಲ್ಲಿ ಪಾತ್ರ
ರಿಷಬ್ ಶೆಟ್ಟಿ ಪ್ರೊಡಕ್ಷನ್ ನ ರೂಪಾಂತರ, ಸುದೀಪ್ ಅಭಿನಯದ ವಿಕ್ರಾಂತ್ ರೋಣ, ಶಿವರಾಜ ಕುಮಾರಗ ಅಭಿನಯದ ಭಜರಂಗಿ2, ಹಲವಾರು ಕಿರುಚಿತ್ರಗಳು, ಕುಬುಸ ಇವರ ಕೊನೆಯ ಚಿತ್ರವಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್