ಕೋಲಾರ, 0೩ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ನಮ್ಮ ಹಿರಿಯರು ನಮ್ಮ ಸಮಾಜದ ಜೀವಂತ ಪಾಠಪುಸ್ತಕಗಳು. ಅವರ ಅನುಭವ ಮತ್ತು ಜ್ಞಾನವೇ ನಮ್ಮ ಅಮೂಲ್ಯ ಸಂಪತ್ತು. ಅವರನ್ನು ಗೌರವಿಸುವುದು, ಅವರ ಕಾಳಜಿ ವಹಿಸುವುದು ನಮ್ಮ ನೈತಿಕ ಕರ್ತವ್ಯವಾಗಿದೆ. ಇಂದಿನ ತರುಣ ಪೀಳಿಗೆಯು ಅವರಿಂದ ಬಹಳಷ್ಟು ಕಲಿಯಬೇಕು” ಎಂದು ಅಂತರಗಂಗ ಬುದ್ಧಿಮಾಂದ್ಯ ಹಾಗೂ ವೃದ್ಧಾಶ್ರಮದ ಅಧ್ಯಕ್ಷ ಪ್ರಜ್ಞ ಶಂಕರ್ ಮನವಿ ಮಾಡಿದರು.
ಹಳ್ಳಿ ಹಾಡು ಸಾಂಸ್ಕೃತಿಕ ಜಾನಪದ ಕಲಾ ಸಂಘ ಮತ್ತಿಕುಂಟೆ ಮತ್ತು ‘ಮೈ ಭಾರತ-ಮೇರಾ ಯುವ ಭಾರತ’ ಸಂಸ್ಥೆಯ ಸಂಯುಕ್ತ ಶಾಲೆಯಲ್ಲಿ ‘ಅಂತರಗಂಗ’ ಬುದ್ಧಿಮಾಂದ್ಯ ಹಾಗೂ ವೃದ್ಧಾಶ್ರಮದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯ ನಾಗರಿಕರಿಗೆ ಹೂವಿನ ಹಾರ ಮತ್ತು ಉಡುಗೊರೆಗಳನ್ನು ಸಮರ್ಪಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದ ಮೂಲಕ ಸಮಾಜದ ಹಿರಿಯ ಸದಸ್ಯರ ಬಗ್ಗೆ ಗೌರವ ಮತ್ತು ಕೃತಜ್ಞತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಯಶಸ್ವಿ ಪ್ರಯತ್ನ ನಡೆಯಿತೆಂದು ಸಂಘಟಕರು ತಿಳಿಸಿದ್ದಾರೆ. ವೃದ್ಧಾಶ್ರಮದ ವಾಸಿಗಳು ಮತ್ತು ಶಾಲೆಯ ಮಕ್ಕಳು ಸಂಗೀತ, ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಎಲ್ಲರನ್ನು ಮಂತ್ರಮುಗ್ಧಗೊಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಳ್ಳಿ ಹಾಡು ಸಾಂಸ್ಕೃತಿಕ ಜಾನಪದ ಕಲಾ ಸಂಘದ ಅಧ್ಯಕ್ಷ ಮತ್ತಿಕುಂಟೆ ಕೃಷ್ಣ, ಕಲಾವಿದ ಸುನಿಲ್, ಯುವ ಮುಖಂಡ ರಾಕೇಶ್, ಸಮಾಜ ಸೇವಕ ಶ್ರೀನಾಥ್ ಹಾಗೂ ಇತರೆ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.
ಚಿತ್ರ : ಕೋಲಾರ ಅಂತರಗಂಗ ಬುದ್ಧಿಮಾಂದ್ಯ ಹಾಗೂ ವೃದ್ಧಾಶ್ರಮದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಅಂತರಗಂಗ ಬುದ್ಧಿಮಾಂದ್ಯ ಹಾಗೂ ವೃದ್ಧಾಶ್ರಮದ ಅಧ್ಯಕ್ಷ ಪ್ರಜ್ಞ ಶಂಕರ್ ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್