ಹೊಸಪೇಟೆ, 03 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸಲಾಗುತ್ತಿದ್ದು, ಅರ್ಹ ನೋಂದಣಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ ಅವರು ತಿಳಿಸಿದ್ದಾರೆ.
ನವಂಬರ್ 1, 2025 ಅನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿ ಈ ಹೊಸ ಪಟ್ಟಿ ಸಿದ್ಧಪಡಿಸುವ ಕಾರ್ಯ ಆರಂಭವಾಗಿದೆ. ಹಿಂದಿನ ಪಟ್ಟಿಯಲ್ಲಿ ಹೆಸರು ಹೊಂದಿರುವ ಮತದಾರರು ಕೂಡ ನಮೂನೆ 19 ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬೇಕು.
ಮತದಾರರ ಪಟ್ಟಿ ಸಿದ್ಧಪಡಿಸುವ ವೇಳಾಪಟ್ಟಿ :
* ನವೆಂಬರ್ 6, 2025 (ಗುರುವಾರ) : ಅರ್ಜಿ ನಮೂನೆ 19 ಸ್ವೀಕರಿಸಲು ಕೊನೆಯ ದಿನ.
* ನವೆಂಬರ್ 25, 2025 (ಮಂಗಳವಾರ) : ಕರಡು ಮತದಾರರ ಪಟ್ಟಿ ಪ್ರಕಟ.
* ನವೆಂಬರ್ 25 ರಿಂದ ಡಿಸೆಂಬರ್ 10, 2025 : ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ನಿಗಧಿಪಡಿಸಿದ ಅವಧಿ.
* ಡಿಸೆಂಬರ್ 30, 2025 (ಮಂಗಳವಾರ) : ಅಂತಿಮ ಮತದಾರರ ಪಟ್ಟಿ ಪ್ರಕಟ.
ಹೆಸರು ನೋಂದಾಯಿಸಲು ಮಾರ್ಗಸೂಚಿಗಳು :
ಭಾರತದ ಪ್ರಜೆಯಾಗಿರುವ, ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಮಾನ್ಯ ನಿವಾಸಿಯಾಗಿರುವ, ಮತ್ತು ನವೆಂಬರ್ 1. 2025 ಕ್ಕೆ ಮುಂಚಿನ 6 ವರ್ಷಗಳಲ್ಲಿ ಒಟ್ಟು ಕನಿಷ್ಠ 3 ವರ್ಷಗಳ ಕಾಲ ಪ್ರೌಢಶಾಲೆಗಿಂತ ಕಡಿಮೆ ಇಲ್ಲದ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧನಾ ವೃತ್ತಿಯಲ್ಲಿ ನಿರತರಾಗಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಹರಾಗಿರುತ್ತಾರೆ.
ಆದರೆ, ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗು ವುದಿಲ್ಲ. ಬದಲಾಗಿ, ಅರ್ಜಿದಾರರು ನಮೂನೆ 19 ಅನ್ನು ಭರ್ತಿ ಮಾಡಿ, ತಮ್ಮ ಸಂಸ್ಥೆಯಿಂದ ಪಡೆದ ಅನುಬಂಧ-2 ರ ಪ್ರಮಾಣಪತ್ರ ದೊಂದಿಗೆ ಸಲ್ಲಿಸಬೇಕು. ಬಲ್ಕ್ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಯಾವುದೇ ವ್ಯಕ್ತಿ ಅಂಚೆ ಮೂಲಕ ಅರ್ಜಿ ಸಲ್ಲಿಸಿದರೆ, ಗೊತ್ತುಪಡಿಸಿದ ಅಧಿಕಾರಿಯು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡುತ್ತಾರೆ.
ವಿಚಾರಣೆಗೆ ಹಾಜರಾಗದಿದ್ದಲ್ಲಿ ಅಥವಾ ಸೂಕ್ತ ದಾಖಲೆಗಳನ್ನು ಒದಗಿಸದಿದ್ದಲ್ಲಿ ಅರ್ಜಿಗಳು ತಿರಸ್ಕøತಗೊಳ್ಳುತ್ತವೆ. ಅಂತಿಮವಾಗಿ, ಅರ್ಹ ಶಿಕ್ಷಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಮೂಲಕ ಸುಭದ್ರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಕರ್ನಾಟಕ ಈಶಾನ್ಯ ಶಿಕ್ಷಕರ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮತ್ತು ಸಂಬಂಧಪಟ್ಟ ವಿಧಾನಸಭಾ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ (ಮಹಾನಗರ ಪಾಲಿಕೆ ಹಾಗೂ ತಹಸೀಲ್ದಾರ ಕಾರ್ಯಾಲಯದಲ್ಲಿ) ನಿಗದಿಪಡಿಸಿದ ಕಾಲಮಿತಿಯೊಳಗೆ ಸಲ್ಲಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್