ನವದೆಹಲಿ, 03 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಲೋಕ ಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಕೊಲಂಬಿಯಾದ ಇಐಎ ವಿಶ್ವವಿದ್ಯಾಲಯದಲ್ಲಿ ನೀಡಿದ ಹೇಳಿಕೆಗಳ ವಿರುದ್ಧ ಭಾರತೀಯ ಜನತಾ ಪಕ್ಷ (ಬಿಜೆಪಿ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ವಕ್ತಾರ ಡಾ. ಸುಧಾಂಶು ತ್ರಿವೇದಿ ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ಭಾರತವನ್ನು ಪದೇ ಪದೇ ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತ ಮಾತೆಯ ಚಿತ್ರ ಹೊಂದಿರುವ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಿದ ದಿನವೇ, ರಾಹುಲ್ ಗಾಂಧಿ ವಿದೇಶದಿಂದ ದೇಶದ ಪ್ರಜಾಪ್ರಭುತ್ವವನ್ನು ಪ್ರಶ್ನಿಸುವ ಹೇಳಿಕೆ ನೀಡಿದರು. ಇದು ಕಾಂಗ್ರೆಸ್ ಪಕ್ಷದ ಕುಸಿತದ ಪ್ರತಿಬಿಂಬ” ಎಂದರು.
ಕೇಂಬ್ರಿಡ್ಜ್ ಮತ್ತು ಸ್ಟ್ಯಾಂಫೋರ್ಡ್ ವಿಶ್ವವಿದ್ಯಾಲಯಗಳು ಮೋದಿ ನೇತೃತ್ವದಲ್ಲಿ ಭಾರತದ ಡಿಜಿಟಲ್ ರೂಪಾಂತರ ಹಾಗೂ ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ಭಾರತದ ಮುಂಚೂಣಿಯನ್ನು ಸಾಬೀತುಪಡಿಸುವ ವರದಿಗಳನ್ನು ಪ್ರಕಟಿಸಿವೆ. ಆದರೆ ರಾಹುಲ್ ಗಾಂಧಿ ಇವುಗಳನ್ನು ನಿರ್ಲಕ್ಷಿಸಿ, ನಿತ್ಯ ಭಾರತ ವಿರೋಧಿ ಧ್ವನಿಗಳನ್ನು ಮಾತ್ರ ಎತ್ತುತ್ತಿದ್ದಾರೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ, “ಭಾರತಕ್ಕೆ ಇರುವ ದೊಡ್ಡ ಬೆದರಿಕೆ ಪ್ರಜಾಪ್ರಭುತ್ವದ ಮೇಲಿನ ದಾಳಿ. ಚೀನಾದಂತೆ ಭಾರತವು ತನ್ನ ಜನರನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಆದರೆ ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಯು ದಾಳಿಗೆ ಒಳಗಾಗಿದೆ” ಎಂದು ಹೇಳಿದ್ದರು.
ಬಿಜೆಪಿ ಇದನ್ನು ಭಾರತದ ಪ್ರತಿಷ್ಠೆಗೆ ಧಕ್ಕೆ ತರುವ ಮತ್ತೊಂದು ಉದಾಹರಣೆ ಎಂದು ತೀವ್ರವಾಗಿ ಖಂಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa