ಹುಬ್ಬಳ್ಳಿ, 03 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಿಲ್ಲೆಯಾದ್ಯಂತ ನಡೆಯುತ್ತಿದೆ. ಸಮೀಕ್ಷೆ ಕೆಲಸ ಯಾವುದೇ ಕಾರಣಕ್ಕೂ ವಿಳಂಬವಾಗದಂತೆ ಎಚ್ಚರ ವಹಿಸಬೇಕಾಗುತ್ತದೆ. ಪ್ರತಿ ದಿನದ ಗುರಿಯನ್ನು ಸಾಧಿಸಲು ಮೇಲ್ವಿಚಾರಕರು ಮುಂದಾಗಬೇಕು ಎಂದು ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಹೇಳಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿ ಕುರಿತು ಮೇಲ್ವಿಚಾರಕರ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಾಲೇ ಸಮೀಕ್ಷೆ ಕಾರ್ಯ ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗಿದೆ. ಆದರೆ ಸಮೀಕ್ಷೆದಾರರು ಈವರೆಗೆ ಶೇ.50 ರಷ್ಟು ಸಾಧನೆ ಮಾಡಿರುವುದಿಲ್ಲ. ಹೀಗಾಗಿ ಗಣತಿ ಕಾರ್ಯವನ್ನು ವೇಗವಾಗಿ ಮಾಡಬೇಕಿದೆ. ನೆಟವರ್ಕ್ ಸಿಗುವ ಜಾಗದಲ್ಲಿ ಸಮೀಕ್ಷೆ ನಡೆಸಲು ಮುಂದಾಗಬೇಕು. ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ನೂರಕ್ಕೆ ನೂರರಷ್ಟು ಗುರಿ ಸಾಧಿಸುವ ಭರದಲ್ಲಿ ತಪ್ಪು ಮಾಹಿತಿಯನ್ನು ಸಂಗ್ರಹಿಸಬಾರದು. ಒಂದು ವೇಳೆ ತಪ್ಪು ನೀಡಿದರೆ ಮೇಲ್ವಿಚಾರಕರನ್ನು ಅಮಾನತ್ತು ಮಾಡಲಾಗುವುದು. ಅದಕ್ಕೆ ಅವಕಾಶ ಕೊಡದಂತೆ ಕಾರ್ಯ ನಿರ್ವಹಿಸಬೇಕು. ಮುಂದಿನ 5 ದಿನಗಳಲ್ಲಿ ನಿಗದಿ ಪಡಿಸಿದ ಗುರಿಯನ್ನು ಸಾಧಿಸಬೇಕು. ಸಮೀಕ್ಷೆಗೆ ಮಾಹಿತಿ ನೀಡಲು ನಿರಾಕರಿಸಿದವರಿಗೆ ಮನವೊಲಿಸಬೇಕಾಗುತ್ತದೆ. ಅವರಿಂದ ನಿಖರ ಮಾಹಿತಿಯನ್ನು ಸಂಗ್ರಹಿಸಲು ಮುಂದಾಗಬೇಕು ಎಂದರು.
ಪ್ರತಿ ದಿನ 300 ರಿಂದ 400 ಮನೆಗಳನ್ನು ಸಮೀಕ್ಷೆ ಮಾಡುವಂತೆ ಮೇಲ್ವಿಚಾರಕರು ಕ್ರಮ ವಹಿಸಬೇಕು. ಸಮೀಕ್ಷೆದಾರರು ಯಾವುದೇ ವಿಳಂಬ ಮಾಡದಂತೆ ಸೂಚನೆ ನೀಡಬೇಕಾಗುತ್ತದೆ. ಹೆಚ್ಚುವರಿ ಸಿಬ್ಬಂದಿ ಅವಶ್ಯವಿದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ವಿನಾಕಾರಣ ಸಮೀಕ್ಷೆ ವಿಳಂಬವಾಗಬಾರದು ಎಂದು ಸೂಚನೆ ನೀಡಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ರುದ್ರೇಶ ಘಾಳಿ ಮಾತನಾಡಿ, ಖಾಲಿ ಮನೆಗಳು, ಹೊರ ರಾಜ್ಯದವರು ಇರುವ ಮನೆಗಳನ್ನು ಗುರುತಿಸಬೇಕು. ಅವರ ಮಾಹಿತಿಯನ್ನು ಸಂಗ್ರಹಿಸಬೇಕಾಗುತ್ತದೆ. ಅಕ್ಟೋಬರ್ 8 ರಿಂದ ಶಾಲೆಗಳು ಪುನಾರಂಭವಾಗಲಿವೆ. ಹೀಗಾಗಿ ನಿಗದಿತ ಅವಧಿಯಲ್ಲಿ ಸಮೀಕ್ಷೆ ಕಾರ್ಯವನ್ನು ಮುಗಿಸಬೇಕು. ಪ್ರತಿದಿನ 400 ಮನೆಗಳನ್ನು ಸಮೀಕ್ಷೆ ನಡೆಸಲು ಮುಂದಾಗಬೇಕಿದೆ. ಆ ನಿಟ್ಟಿನಲ್ಲಿ ಮೇಲ್ವಿಚಾರಕರು ಕಾರ್ಯಪ್ರವೃತರಾಗಬೇಕು ಎಂದು ಸೂಚಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa