ಕನೇರಿ ಶ್ರೀಗಳ ಆರೋಪ ಶುದ್ಧ ಸುಳ್ಳು : ತೋಂಟದ ಶ್ರೀಗಳು
ಗದಗ, 20 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಯಾವುದೋ ಒಂದು ದೂರದರ್ಶನದ ಸಂದರ್ಶನದಲ್ಲಿ ಮಹಾರಾಷ್ಟ್ರ ಕನೇರಿಮಠದ ಶ್ರೀಗಳು ನಮ್ಮ ಪೂರ್ವಾಶ್ರಮದ ಸಂಬಂಧಿಗಳಿಗೆ ನಾವು 20 ತೊಲೆ ಬಂಗಾರ ಕೊಟ್ಟಿರುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂತು. ಅವರ ಈ ಆರೋಪ ನಿರಾಧಾರ ಮತ್ತು ಶುದ್ಧ ಸುಳ್ಳು. ಈ ರೀತಿಯ ಆ
ಪೋಟೋ


ಗದಗ, 20 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಯಾವುದೋ ಒಂದು ದೂರದರ್ಶನದ ಸಂದರ್ಶನದಲ್ಲಿ ಮಹಾರಾಷ್ಟ್ರ ಕನೇರಿಮಠದ ಶ್ರೀಗಳು ನಮ್ಮ ಪೂರ್ವಾಶ್ರಮದ ಸಂಬಂಧಿಗಳಿಗೆ ನಾವು 20 ತೊಲೆ ಬಂಗಾರ ಕೊಟ್ಟಿರುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂತು. ಅವರ ಈ ಆರೋಪ ನಿರಾಧಾರ ಮತ್ತು ಶುದ್ಧ ಸುಳ್ಳು. ಈ ರೀತಿಯ ಆರೋಪ ಮಾಡುವ ಮೂಲಕ ಬಸವ ಸಂಸ್ಕೃತಿ ಅಭಿಯಾನದ ಮುಂಚೂಣಿಯಲ್ಲಿರುವ ನಮ್ಮನ್ನು ಹೆದರಿಸಿ ಹಿಂದೆ ಸರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಂಬಳ-ಗದಗ ತೋಂಟದಾರ್ಯಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಮಾಧ್ಯಮಗಳಿಗೆ ಪ್ರಕಟಣೆಯ ಮೂಲಕ ಈ ವಿಷಯ ತಿಳಿಸಿರುವ ಶ್ರೀಗಳು ಈ ಮೊದಲು ನಾವು ನಮ್ಮ ಪೂರ್ವಾಶ್ರಮ ಸಂಬಂಧಿಗಳ ಯಾವುದೇ ಮದುವೆಗೆ ಹೋದ ಉದಾಹರಣೆ ಇಲ್ಲ. ಮದುವೆಯಾಗುವ ಹುಡುಗ ನಮ್ಮ ಪ್ರಸಾದನಿಲಯದ ವಿದ್ಯಾರ್ಥಿಯಾಗಿದ್ದವ. ಅವನ ದಯನೀಯ ಪ್ರಾರ್ಥನೆಗೆ ಹೋಗಲೇಬೇಕಾದ ಅನಿವಾರ್ಯತೆ. ಆದಾಗ್ಯೂ ಮದುವೆಯ ದಿನ ಹೋಗದೇ ಹಿಂದಿನ ದಿನ ನಾವು ಎಲ್ಲ ಮದುವೆಗಳಿಗೆ ಹೋದಂತೆ ಹೋಗಿ ಅವನಿಗೊಂದು ಶಾಲು ಹೊದಿಸಿ ಆಶೀರ್ವದಿಸಿ ಬರಲಾಗಿದೆ. ನಾವು ಈ ಮದುವೆಯಲ್ಲಿ ಯಾವುದೇ ಬಂಗಾರ ಕೊಟ್ಟಿರುವುದಿಲ್ಲಾ. 20 ತೊಲಿ ಬಂಗಾರ ಹಾಕಿದರು ಎಂದು ಹೇಳಿರುವುದು ನಮ್ಮ ಚಾರಿತ್ರ್ಯಹನನದ ಕಾರ್ಯವಾಗಿದೆ. ಅಭಿಯಾನದಲ್ಲಿ ಭಾಗವಹಿಸಿದ ಸ್ವಾಮಿಗಳು ದಾರು ಕುಡಿಯುತ್ತಾರೆ.ಮಾಂಸ ಭಂಜಕರಾಗಿದ್ದಾರೆ.

ಕ್ರಾಪು ಬಿಟ್ಟು ಮೇಲೆ ಪೇಟಾ ಸುತ್ತುತ್ತಾರೆ ಎಂಬಂತಹ ಅವರ ಚಾರಿತ್ರ್ಯಹನನ ಮಾಡುವ ಮಾತುಗಳು ಯಾವ ಉದ್ದೇಶ ಹೊಂದಿವೆ ಎಂಬುದು ಸಾರ್ವಜನಿಕರಿಗೆ ತಿಳಿದ ವಿಷಯವಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ಲಿಂಗಾಯತ ಸ್ವತಂತ್ರ ಧರ್ಮವಾದರೆ ಲಿಂಗಾಯತರು ಧಾರ್ಮಿಕ ಅಲ್ಪಸಂಖ್ಯಾತರಾಗುವ ಮೂಲಕ ಸಂವಿಧಾನದತ್ತವಾದ ಅನೇಕ ಸೌಲಭ್ಯಗಳನ್ನು ಪಡೆಯುತ್ತಾರೆ. ಇದು ಲಿಂಗಾಯತರ ಭವಿಷ್ಯದ ಹಿತದೃಷ್ಟಿಯಿಂದ ನಡೆದ ಹೋರಾಟ. ಇದರಿಂದ ದೇಶ ಹಾಳಾಗುತ್ತದೆ ಎಂದು ಹೇಳುವುದು ಸರಿಯಲ್ಲ. ಈ ಮೊದಲು ಭಾರತೀಯರೇ ಆಗಿರುವ ಬೌದ್ಧ ಧರ್ಮೀಯರಿಗೆ, ಸಿಖ್ಖ ಧರ್ಮದವರಿಗೆ ಮತ್ತು ಇತ್ತೀಚೆಗೆ ಜೈನಧರ್ಮದವರಿಗೆ ಸ್ವತಂತ್ರ ಧರ್ಮದ ಸ್ಥಾನ ನೀಡಲಾಗಿದೆ. ಇದರಿಂದ ದೇಶದ ಭದ್ರತೆಗೆ ಯಾವ ಹಾನಿಯಾಗಿದೆ? ಅದೇ ಮಾದರಿಯಲ್ಲಿ ದೇಶಪ್ರೇಮಿಗಳಾಗಿರುವ ಲಿಂಗಾಯತರ ಸಾಂವಿಧಾನಿಕ ಹಕ್ಕುಗಳನ್ನು ಪಡೆಯುವುದು ಲಿಂಗಾಯತ ಹೋರಾಟದ ಉದ್ದೇಶವಾಗಿದೆ.

ಇದನ್ನು ತಾತ್ತ್ವಿಕ ನೆಲೆಯಲ್ಲಿ ಅವರು ಖಂಡಿಸುವುದನ್ನು ಬಿಟ್ಟು, ಹೋರಾಟದ ಮುಂಚೂಣಿಯಲ್ಲಿರುವ ನಮ್ಮನ್ನು ಮಾತ್ರ ಗುರಿ ಮಾಡಿಕೊಂಡು ಸುಳ್ಳು ಆರೋಪ ಹೊರಿಸುವುದು ಎಷ್ಟು ಸರಿ? ನಾವು ಅಂಥ ಕೆಲಸ ಮಾಡಿದ್ದರೆ ನಮ್ಮ ಭಕ್ತರು ಪ್ರಶ್ನಿಸುತ್ತಾರೆ. ನಿಮ್ಮ ಮಠದ ಹಾಗೆಯೇ ನಮ್ಮ ಮಠದ ಆಡಳಿತವೂ ಪಾರದರ್ಶಕವೇ ಆಗಿದೆ. ಮಠದ ಎಲ್ಲ ವ್ಯವಹಾರಗಳನ್ನು ವ್ಯವಸ್ಥಾಪಕರು, ವಿದ್ಯಾಸಂಸ್ಥೆಗಳ ವ್ಯವಹಾರಗಳನ್ನು ಆಡಳಿತಾಧಿಕಾರಿಗಳು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ನಾವು ನಮಗೆ ಬೇಕಾದವರನ್ನು ನೇಮಿಸಿಕೊಂಡು ಯಾವುದೇ ಭ್ರಷ್ಟ ವ್ಯವಹಾರ ಮಾಡಿಲ್ಲ ಎಂದು ಕನೇರಿ ಶ್ರೀಗಳಿಗೆ ಈ ಮೂಲಕ ಸ್ಪಷ್ಟಪಡಿಸುತ್ತೇವೆ. ಅವರು ಇನ್ನು ಮೇಲಾದರೂ ಧರ್ಮಕ್ಕೆ ಧರ್ಮಾಧಿಕಾರಿಗಳಿಗೆ ಸಂಬಂಧಿಸಿದ ವಿಷಯವನ್ನು ತಾತ್ತ್ವಿಕ ನೆಲೆಯಲ್ಲಿ ಖಂಡಿಸಲಿ ಅದಕ್ಕೆ ಸ್ವಾಗತವಿದೆ.

ಆದರೆ ಸುಳ್ಳು ಆರೋಪಗಳ ಮೂಲಕ ಚಾರಿತ್ರ್ಯಹನನ ಮಾಡುವ ಕೆಲಸ ಯಾರೂ ಮಾಡಬಾರದು, ಇದು ಮಠಾಧಿಪತಿಗಳಾದವರಿಗೆ ಶೋಭೆ ತರುವಂತಹದ್ದಲ್ಲ ಎಂದು ಶ್ರೀಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande