ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆಗೆ ಅಧಿಕೃತ ಚಾಲನೆ
ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆಗೆ ಅಧಿಕೃತ ಚಾಲನೆ.
ಚಿತ್ರ ; ಕೋಲಾರ ನಗರದ ಗಾಂಧೀ ವೃತ್ತದಲ್ಲಿ ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆ ಟಾಸ್ಕ್ ಪೋರ್ಸ್ ವಾಹನಕ್ಕೆ ಜಿಲ್ಲಾಧಿಕಾರಿ ಎಂ.ಆರ್.ರವಿ ಚಾಲನೆ ನೀಡಿದರು.


ಕೋಲಾರ, 0೨ ಆಕ್ಟೋಬರ್ (ಹಿ.ಸ) :

ಆ್ಯಂಕರ್ : ಕೋಲಾರ ಜಿಲ್ಲೆಯಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ಜಿಲ್ಲಾಡಳಿತವು ನಗರಸಭೆಯೊಂದಿಗೆ ’ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆ’ ಎಂಬ ವಿಶೇಷ ತಂಡವನ್ನು ರಚಿಸಿದೆ. ಈ ಕಾರ್ಯಪಡೆಯು ನಗರಸಭೆ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿನ ಉದ್ಯಾನವನಗಳು, ರಸ್ತೆಗಳು, ಚರಂಡಿಗಳು ಮತ್ತು ಕೆರೆಗಳ ಸ್ವಚ್ಛತೆಯನ್ನು ನಿರ್ವಹಿಸುತ್ತದೆ. ಅಲ್ಲದೆ, ಸಾರ್ವಜನಿಕರಲ್ಲಿ ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸುವುದು, ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ತಡೆಯುವುದು, ಹಾಗೂ ಕಾನೂನು ಉಲ್ಲಂಘಿಸುವವರ ಮೇಲೆ ಕ್ರಮ ಕೈಗೊಳ್ಳುವುದು ಇದರ ಮುಖ್ಯ ಜವಾಬ್ದಾರಿಗಳು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು.

ಕೋಲಾರ ನಗರದ ಗಾಂಧೀ ವೃತ್ತದಲ್ಲಿ ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆ ಟಾಸ್ಕ್ ಪೋರ್ಸ್ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೋಲಾರಮ್ಮ ಕಾರ್ಯಪಡೆಯ ಮುಖ್ಯ ಉದ್ದೇಶಗಳು: ನಗರಗಳು ಮತ್ತು ಪಟ್ಟಣಗಳ ಉದ್ಯಾನವನಗಳ ಸ್ವಚ್ಛತೆ ಕಾಪಾಡುವುದು. ರಸ್ತೆಗಳು, ಚರಂಡಿಗಳು, ಮತ್ತು ಕೆರೆಗಳಲ್ಲಿ ತ್ಯಾಜ್ಯ ಸಂಗ್ರಹವಾಗದಂತೆ ನೋಡಿಕೊಳ್ಳುವುದು. ತ್ಯಾಜ್ಯ ವಿಲೇವಾರಿ ಮತ್ತು ಸ್ವಚ್ಛತೆ ನಿಯಮ ಉಲ್ಲಂಘಿಸುವವರ ಮೇಲೆ ದಂಡ ವಿಧಿಸುವುದು ಮತ್ತು ಅಗತ್ಯವಿದ್ದರೆ ಎಫ್.ಐ.ಆರ್ ದಾಖಲಿಸುವುದು. ನಿಷೇಧಿತ ಪ್ಲಾಸ್ಟಿಕ್ ಬಳಕೆ ತಡೆಯುವುದು ಮತ್ತು ನಿಯಮ ಉಲ್ಲಂಘಿಸುವರ ಮೇಲೆ ಕ್ರಮ ಜರುಗಿಸುವುದು. ಕುಡಿಯುವ ನೀರಿನ ಸೋರಿಕೆಗಳ ಬಗ್ಗೆ ವರದಿ ಸಲ್ಲಿಸುವುದು. ಸಾರ್ವಜನಿಕರಿಗೆ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಮತ್ತು ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು ಮೂಡಿಸುವುದು. ಸಾರ್ವಜನಿಕ ಶೌಚಾಲಯಗಳ ಬಳಕೆ ಮತ್ತು ನೈರ್ಮಲ್ಯವನ್ನು ಕಾಪಾಡಲು ಕ್ರಮ ಕೈಗೊಳ್ಳುವುದು.

ಕಾರ್ಯಪಡೆಯ ಕಾರ್ಯಚಟುವಟಿಕೆ: ಈ ಕಾರ್ಯಪಡೆಯು ಪ್ರತಿ ದಿನ ಬೆಳಗ್ಗೆ ೬ ರಿಂದ ೯ ರವರೆಗೆ ಮತ್ತು ಸಂಜೆ ೫ ರಿಂದ ೮ ರವರೆಗೆ ಕಾರ್ಯನಿರ್ವಹಿಸಿ, ನಗರಗಳನ್ನು ಪರಿವೀಕ್ಷಣೆ ಮಾಡುತ್ತದೆ. ಅನೈರ್ಮಲ್ಯವಿರುವ ಪ್ರದೇಶಗಳನ್ನು (ಬ್ಲಾಕ್ ಸ್ಪಾಟ್ಗಳನ್ನು) ಗುರುತಿಸಿ, ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ.

ಈ ಕಾರ್ಯಪಡೆಯನ್ನು ಮೊದಲಿಗೆ ಕೋಲಾರ ನಗರಸಭೆಯಲ್ಲಿ ಯಶಸ್ವಿಯಾಗಿ ಕಾರ್ಯಗತಗೊಳಿಸಿ, ಬಳಿಕ ಇತರ ಪುರಸಭೆ ಮತ್ತು ನಗರಸಭೆಗಳಲ್ಲಿ ವಿಸ್ತರಿಸುವ ಯೋಜನೆ ಇದೆ ಎಂದು ತಿಳಿಸಿದರು.

ರಾಜ್ಯದಲ್ಲೇ ಇಂಥ ಯೋಜನೆ ಮೊದಲಬಾರಿಗೆ ಕೋಲಾರದಲ್ಲಿ ಜಾರಿಯಾಗುತ್ತಿದ್ದು, ಸಾರ್ವಜನಿಕರ ಸಹಭಾಗಿತ್ವ ಪ್ರಮುಖ ಪಾತ್ರ ವಹಿಸುತ್ತದೆ. ಈನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಕೋರಿದೆ ಎಂದರು.

ಕಾರ್ಯಕ್ರಮದಲ್ಲಿ ಕೋಲಾರ ಸಂಸದ ಎಂ. ಮಲ್ಲೇಶ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಬಿ. ನಿಖಿಲ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್, ಉಪಾಧ್ಯಕ್ಷೆ ಸಂಗೀತ, ಸದಸ್ಯರು ರಾಮಯ್ಯ, ಕೋಲಾರ ನಗರಸಭೆ ಆಯುಕ್ತರು ನವೀನ್ ಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ : ಕೋಲಾರ ನಗರದ ಗಾಂಧೀ ವೃತ್ತದಲ್ಲಿ ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆ ಟಾಸ್ಕ್ ಪೋರ್ಸ್ ವಾಹನಕ್ಕೆ ಜಿಲ್ಲಾಧಿಕಾರಿ ಎಂ.ಆರ್.ರವಿ ಚಾಲನೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande