ನವದೆಹಲಿ, 2 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಪದ್ಮವಿಭೂಷಣ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಶಾಸ್ತ್ರೀಯ ಗಾಯಕ ಪಂಡಿತ್ ಛನ್ನುಲಾಲ್ ಮಿಶ್ರಾ (91) ಇಂದು ಬೆಳಿಗ್ಗೆ ನಿಧನರಾದರು.
ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುವಾರ ಬೆಳಿಗ್ಗೆ 4.15 ಕ್ಕೆ ಮಿರ್ಜಾಪುರದಲ್ಲಿ ಕೊನೆಯುಸಿರೆಳೆದರು.
ಸೆಪ್ಟಿಸೆಮಿಯಾದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದರು. ಅಂತ್ಯಕ್ರಿಯೆಯನ್ನು ವಾರಣಾಸಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬನಾರಸ್ ಘರಾನಾದ ಪ್ರಮುಖ ಪ್ರವರ್ತಕರಾಗಿದ್ದ ಪಂಡಿತ್ ಮಿಶ್ರಾ, ವಿಶೇಷವಾಗಿ ಖಯಾಲ್ ಮತ್ತು ಪುರಬ್ ಆಂಗ್ ತುಮ್ರಿಗಳ ಮೂಲಕ ಪ್ರಸಿದ್ಧಿ ಪಡೆದಿದ್ದರು. ಠುಮ್ರಿ, ದಾದ್ರಾ, ಚೈತಿ ಹಾಗೂ ಭಜನ್ ಗಾಯನದಲ್ಲಿ ವಿಶಿಷ್ಟ ಗುರುತು ಮೂಡಿಸಿ ಶಾಸ್ತ್ರೀಯ ಸಂಗೀತವನ್ನು ಜನಸಾಮಾನ್ಯರಿಗೂ ತಲುಪಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದರು.
1936ರ ಆಗಸ್ಟ್ 3ರಂದು ಅಜಂಗಢದಲ್ಲಿ ಜನಿಸಿದ ಮಿಶ್ರಾ, ವಾರಣಾಸಿಯನ್ನು ತಮ್ಮ ಕಾರ್ಯಭೂಮಿಯನ್ನಾಗಿ ಮಾಡಿಕೊಂಡಿದ್ದರು. 2020ರಲ್ಲಿ ಅವರಿಗೆ ಪದ್ಮವಿಭೂಷಣ, 2010ರಲ್ಲಿ ಪದ್ಮಭೂಷಣ ಹಾಗೂ 2000ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. 2010ರಲ್ಲಿ ಉತ್ತರ ಪ್ರದೇಶ ಸರ್ಕಾರದ ಯಶ್ ಭಾರತಿ ಪ್ರಶಸ್ತಿಯನ್ನೂ ಪಡೆದಿದ್ದರು.
ಆಲ್ ಇಂಡಿಯಾ ರೇಡಿಯೋ ಹಾಗೂ ದೂರದರ್ಶನದಲ್ಲಿ ಉನ್ನತ ದರ್ಜೆಯ ಕಲಾವಿದರಾಗಿದ್ದ ಅವರು, ಕೇಂದ್ರ ಸಂಸ್ಕೃತಿ ಸಚಿವಾಲಯದ (ಉತ್ತರ-ಮಧ್ಯ) ಸಲಹಾ ಸಮಿತಿಯ ಸದಸ್ಯರಾಗಿದ್ದರು.
2014ರ ಲೋಕ ಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಸ್ಪರ್ಧಿಸಿದಾಗ, ಪಂಡಿತ್ ಛನ್ನುಲಾಲ್ ಮಿಶ್ರಾ ಅವರ ಪ್ರಮುಖ ಪ್ರತಿಪಾದಕರಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa