ನಾಗ್ಪುರ್, 02 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಯಾವುದೇ ಅಸ್ಪೃಶ್ಯತೆ ಅಥವಾ ಜಾತಿ ತಾರತಮ್ಯವಿಲ್ಲ ಎಂದು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ 100ನೇ ವಾರ್ಷಿಕೋತ್ಸವದ ಅಂಗವಾಗಿ ನಾಗ್ಪುರದ ರೇಶಿಂಬಾಗ್ ಮೈದಾನದಲ್ಲಿ ನಡೆದ ವಿಜಯದಶಮಿ ಆಚರಣೆಯಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
1991ರ ಸಾರ್ವತ್ರಿಕ ಚುನಾವಣೆಯ ವೇಳೆ ಮೊದಲ ಬಾರಿಗೆ ಆರ್‌ಎಸ್‌ಎಸ್‌ನ್ನು ಸಮೀಪದಿಂದ ತಿಳಿಯುವ ಅವಕಾಶ ಸಿಕ್ಕಿತು. ಸಮಾಜದ ಎಲ್ಲ ವರ್ಗಗಳಿಗೂ ಸಂಘದಲ್ಲಿ ಅವಕಾಶವಿದೆ. ಆದರೆ ಇನ್ನೂ ಅನೇಕ ಜನರಿಗೆ ಈ ವಿಚಾರ ತಿಳಿದಿಲ್ಲ” ಎಂದು ಅವರು ಹೇಳಿದರು.
2001ರಲ್ಲಿ ಕೆಂಪುಕೋಟೆ ಸಂಕೀರ್ಣದಲ್ಲಿ ನಡೆದ ದಲಿತ ಸಂಗಮ ರ್ಯಾಲಿಯನ್ನು ಉಲ್ಲೇಖಿಸಿ, ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ‘ಮನು ಸ್ಮೃತಿ’ ಆಧಾರದ ಮೇಲೆ ಅಲ್ಲ, ‘ಭೀಮ್ ಸ್ಮೃತಿ’ ಅಂದರೆ ಸಂವಿಧಾನದ ಆಧಾರದ ಮೇಲೆ ನಡೆಯುತ್ತದೆ ಎಂದು ಹೇಳಿರುವುದನ್ನು ಸ್ಮರಿಸಿದರು.
ನಾನು ರಾಷ್ಟ್ರಪತಿಯಾಗಿ ಇದ್ದಾಗ ಸದಾ ಸಂವಿಧಾನಿಕ ಮೌಲ್ಯಗಳು ಹಾಗೂ ಬಾಬಾ ಸಾಹೇಬರ ಆದರ್ಶಗಳನ್ನು ಆದ್ಯತೆ ನೀಡಿದ್ದೇನೆ ಎಂದ ಅವರು ವಿಜಯದಶಮಿ, ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಗಳು ಒಂದೇ ದಿನ ಬಂದಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಈ ವರ್ಷ ಶ್ರೀ ಗುರು ತೇಜ್ ಬಹದ್ದೂರ್ ಅವರ ತ್ಯಾಗದ 350ನೇ ವರ್ಷಾಚರಣೆ ನಡೆಯುತ್ತಿರುವುದನ್ನು ಸ್ಮರಿಸಿದರು. ಅವರು ಸಮಾಜವನ್ನು ಅನ್ಯಾಯದಿಂದ ಮುಕ್ತಗೊಳಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದರು ಎಂದರು. ಜೊತೆಗೆ, ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದರು.
ಸಮಾರಂಭಕ್ಕೂ ಮುನ್ನ ಮಾಜಿ ರಾಷ್ಟ್ರಪತಿ ಕೋವಿಂದ್, ರೇಶಿಂಬಾಗ್ ಸಂಕೀರ್ಣದಲ್ಲಿರುವ ಸ್ಮೃತಿ ಮಂದಿರದಲ್ಲಿ ಸಂಘದ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರಿಗೆ ಗೌರವ ಸಲ್ಲಿಸಿದರು. ಬಳಿಕ ಕೋವಿಂದ್ ಹಾಗೂ ಭಾಗವತ್ ಇಬ್ಬರೂ ಆಯುಧ ಪೂಜೆಯಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಸೇನೆಯ ಲೆಫ್ಟಿನೆಂಟ್ ಜನರಲ್ ರಾಣಾ ಪ್ರತಾಪ್ ಕಾಲಿತ್, ಡೆಕ್ಕನ್ ಗ್ರೂಪ್‌ನ ಕೆ.ವಿ. ಕಾರ್ತಿಕ್, ಬಜಾಜ್ ಗ್ರೂಪ್‌ನ ಸಂಜೀವ್ ಬಜಾಜ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು.
ವಿಶೇಷವಾಗಿ ಸಂಘದ ಶತಮಾನೋತ್ಸವ ಆಚರಣೆಗೆ ಘಾನಾ, ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ, ಥೈಲ್ಯಾಂಡ್, ಯುಕೆ ಮತ್ತು ಅಮೆರಿಕಾದಿಂದ ವಿದೇಶಿ ಅತಿಥಿಗಳನ್ನು ಆಹ್ವಾನಿಸಲಾಗಿತ್ತು.
ಶತಮಾನೋತ್ಸವದ ವಿಶೇಷತೆ
ಡಾ. ಹೆಡ್ಗೆವಾರ್ ಅವರು ಸೆಪ್ಟೆಂಬರ್ 27, 1925ರಂದು ವಿಜಯದಶಮಿಯ ದಿನ ನಾಗ್ಪುರದಲ್ಲೇ ಸಂಘವನ್ನು ಸ್ಥಾಪಿಸಿದ್ದರು. ಅದರಿಂದಾಗಿ ಈ ವರ್ಷದ ವಿಜಯದಶಮಿ ಆರ್‌ಎಸ್‌ಎಸ್ ಸ್ವಯಂಸೇವಕರಿಗೆ ಇತಿಹಾಸಾತ್ಮಕ ಮಹತ್ವವನ್ನು ಪಡೆದುಕೊಂಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa