ಕೊಪ್ಪಳ, 02 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸತ್ಯ, ಶಾಂತಿ, ಅಹಿಂಸೆಯ ಮಾರ್ಗಗಳ ಜೊತೆಗೆ ಸ್ವಚ್ಛತೆ, ಸರಳತೆಗೂ ಮಹತ್ವ ನೀಡಿದ್ದರು ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ
ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ತರಬೇತಿ ಕೇಂದ್ರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಹಾಗೂ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿ ಎಂದಾಕ್ಷಣ ಸ್ವಾವಲಂಭನೆ, ಸ್ವದೇಶಿ ವಸ್ತುಗಳ ಬಳಕೆಗೆ ಉತ್ತೇಜನ. ಬಡವರ, ಮಹಿಳೆಯರ, ದೀನ ದಲಿತರ ಉದ್ದಾರ. ವಿದ್ಯಾರ್ಥಿಗಳ ಕಲಿಕೆ ಮತ್ತು ಸ್ವಚ್ಛತೆಯೇ ಸೇವೆ. ಹೀಗೆ ಹಲವಾರು ಅಂಶಗಳು ನಮ್ಮ ಮುಂದೆ ಬರುತ್ತವೆ. ಗ್ರಾಮೀಣ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸ್ವಾವಲಂಭನೆಯ ಧೇಯ ಉದ್ದೇಶವನ್ನಿಟ್ಟುಕೊಂಡು ಗ್ರಾಮ ಸ್ವರಾಜ್ ಆಗಬೇಕೆಂಬುವುದು ಗಾಂಧೀಜಿಯವರ ಆಶಯವಾಗಿತ್ತು. ಪಂಚಾಯತ್ ರಾಜ್ ಕಾಯ್ದೆಯನ್ನು ಬದಲಾವಣೆ ಮಾಡಿ, ಗ್ರಾಮ ಸ್ವರಾಜ್ ಕಾಯ್ದೆಯನ್ನಾಗಿಸಲಾಗಿದೆ. ಗ್ರಾಮ ಸ್ವರಾಜ್ಯ, ಸತ್ಯಾಗ್ರಹ, ಚಳುವಳಿಯಂತ ಗಾಂಧೀಜಿಯವರ ಪರಿಕಲ್ಪನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಇವತ್ತಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಕೌಶಲ್ಯ ತರಬೇತಿಗಳು ಮತ್ತು ಕೌಶಲ್ಯ ಕೋರ್ಸ್ಗಳು ಅತ್ಯವಶ್ಯಕವಾಗಿವೆ. ಆದರೆ, ಅಂದಿನ ಕಾಲದಲ್ಲಿ ಮಹಾತ್ಮಾ ಗಾಂಧೀಜಿಯವರು ಅಸ್ಸಾಂನಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ಕಲಿಕೆಗೆ ಪ್ರೋತ್ಸಾಹಿಸುತ್ತಿದ್ದರು. ಗಾಂಧೀಜಿಯವರು ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ಸ್ವಚ್ಛತಾ ಹೀ ಸೇವಾ ಪಾಕ್ಷೀಕ ಅಭಿಮಾನವನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ಸ್ವಚ್ಛತಾ ಜಾಗೃತಿ ಮೂಡಿಸಲಾಗಿದೆ. ಗಾಂಧೀಜಿಯವರ ಆಶಯದಂತೆ ಎಲ್ಲರೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತಗೆ ಸ್ವದೇಶಿ ವಸ್ತುಗಳ ಬಳಕೆಗೆ ಹೆಚ್ಚು ಉತ್ತೇಜನ ನೀಡಬೇಕು. ಲಾಲ್ ಬಹಾದ್ದೂರ ಶಾಸ್ತ್ರೀಜಿಯವರು ಈ ದೇಶ ಕಂಡ ಸರಳ ಸಜ್ಜನಿಕೆಯ ಪ್ರಧಾನಿಯಾಗಿದ್ದರು. ಅವರ ಜಯಂತಿಯು ಸಹ ಇಂದು ಇದೆ. ಇಂತಹ ಮಾಹಾನ್ ವ್ಯಕ್ತಿಗಳ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕೊಪ್ಪಳದ ಹಿರಿಯ ಲೇಖಕರು ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ಸಾವಿತ್ರಿ ಮುಜಮದಾರ ಅವರು ಗಾಂಧೀಜಿಯವರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಮಹಾತ್ಮಾ ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ಪಾಲನೆ ಮಾಡಿ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ್ದರು. ತಮ್ಮ ಬದುಕಿನಲ್ಲಿ ಸರಳತೆಯನ್ನ ರೂಢಿಸಿಕೊಂಡಿದ್ದರು. ಅವರ ಹೋರಾಟ, ಸತ್ಯಾಗ್ರಹವು ನಮಗೆಲ್ಲರಿಗೂ ಮಾದರಿಯಾಗಿದೆ. ಗಾಂಧೀಜಿಯವರು ಮಹಿಳೆಯರಿಗೂ ಮಹತ್ವ ನೀಡುತ್ತಿದ್ದರು. ದೀನ ದಲಿತರಗೆ ಹಾಗೂ ಹಳ್ಳಿಗಳನ್ನು ಮತ್ತು ಹಳ್ಳಿಯ ಜನರನ್ನು, ಕೃಷಿಕರನ್ನು ತುಂಬಾ ಪ್ರೀತಿಸುತ್ತಿದ್ದರು. ಎಲ್ಲರನ್ನು ಸಮಭಾವದಿಂದ ಕಾಣುವಂತಹ ವ್ಯಕ್ತಿ ಅವರಾಗಿದ್ದರು ಎಂದರು.
ಸತ್ಯ ಹಾಗೂ ಅಹಿಂಸೆಯ ಮೂಲಕ ಎಲ್ಲವನ್ನು ಸಾಧಿಸಬಹುದು ಎಂದು ಗಾಂಧೀಜಿಯವರು ತೋರಿಸಿಕೊಟ್ಟಿದ್ದಾರೆ. ಜಾತಿ, ಧರ್ಮದ ಬೇಧ-ಭಾವ ಮಾಡದೇ ಎಲ್ಲರೂ ಸಹಬಾಳ್ವೆಯ ಜೀವನ ನಡೆಸಬೇಕು ಎಂದು ನಮಗೆ ಮಹತ್ವದ ಸಂದೇಶವನ್ನು ನೀಡಿದ್ದಾರೆ. ಮಹಾತ್ಮ ಗಾಂಧೀಜಿಯವರ ಜೀವನ ಮೌಲ್ಯಗಳು ವಿದ್ಯಾರ್ಥಿ ಮತ್ತು ಯುವಜನರಿಗೆ ಮಾದರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಗಾಂಧೀ ಜೀವನ ಕುರಿತಾದ ಚಲನಚಿತ್ರವನ್ನು ಪ್ರದರ್ಶನ ಕಾರ್ಯಕ್ರಮವನ್ನು ಬರುವ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
*ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ:* ಮಹಾತ್ಮ ಗಾಂಧೀಜಿ ಜಯಂತಿ ನಿಮಿತ್ತ ವಾರ್ತಾ ಇಲಾಖೆಯಿಂದ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರಮಾಣ ಪತ್ರ ಮತ್ತು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
*ಗಾಂಧೀ ಭಜನೆ:* ಕೊಪ್ಪಳ ಜಿಲ್ಲೆಯ ಕಲಾವಿದರಾದ ಭಾಷು ಕಿನ್ನಾಳ ಹಾಗೂ ತಂಡದವರು ಗಾಂಧೀಜಿಯವರಿಗೆ ಪ್ರೀಯವಾಗಿದ್ದ ಭಜನೆಗಳನ್ನು ಹಾಡಿದರು. ಕೊಪ್ಪಳ ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರು ಕಾರ್ಯಕ್ರಮ ನಿರೂಪಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಜಿ. ಸುರೇಶ ಅವರು ಸ್ವಾಗತಿಸಿದರು.
ಸಮಾರಂಭದಲ್ಲಿ ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು, ಪದವಿ ಪರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ ಮಲ್ಲಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್