ರಾಯಚೂರು, 02 ಅಕ್ಟೋಬರ್(ಹಿ.ಸ.) :
ಆ್ಯಂಕರ್ : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ರಾಯಚೂರು ಗ್ರಾಮೀಣ ಕ್ಷೇತ್ರದ ನಾನಾ ಪ್ರದೇಶಗಳಿಗೆ ಭೇಟಿ ನೀಡಿ ಮಳೆಯಿಂದಾದ ಹಾನಿಯ ಬಗ್ಗೆ ಪರಿಶೀಲಿಸಿದ್ದಾರೆ.
ಚಿಕ್ಕಸೂಗುರು, ದೇವಸಗೂರು, ಚಂದ್ರಬ0ಡಾ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ನಾನಾ ಪ್ರದೇಶಗಳಲ್ಲಿ ಸಂಚರಿಸಿ ಹತ್ತಿ ಸೇರಿದಂತೆ ಹಾಳಾದ ಬೇರೆ ಬೇರೆ ಬೆಳೆಗಳ ಹಾನಿಯ ಬಗ್ಗೆ ಶಾಸಕರು ಖುದ್ದು ಪರಿಶೀಲಿಸಿದರು.
ಈ ಬಾರಿ ಹತ್ತಿ ಬೆಳೆಯು ಸಂಪನ್ನವಾಗಿ ಬಂದಿತ್ತು. ಜಮೀನೊಳಗೆ ಕಾಲಿಡಲು ಆಗದಷ್ಟು ಹತ್ತಿ ಬೆಳೆ ಗಿಡಗಳು ದೊಡ್ಡದಾಗಿ ಬೆಳೆದಿದ್ದವು. ಆದರೆ, ಅತಿಯಾದ ಮಳೆಯಿಂದಾಗಿ ಜಮೀನಿನಲ್ಲಿ ನೀರು ನಿಂತು ಹತ್ತಿ ಬೆಳೆಯ ಫಸಲು ಕೈಗೆ ಸಿಗದಂತಾಗಿದೆ. ಹತ್ತಿ ಬೆಳೆಯ ಗಿಡಗಳು ಒಣಗುತ್ತಿವೆ. ಈಗಾಗಲೇ ಬಿಡಿಸಲು ಬಂದಿದ್ದ ಹತ್ತಿ ಗಿಡದಲ್ಲಿನ ಫಸಲು ಮಳೆ ನೀರಿನಿಂದ ತೊಯ್ದು ಕಪ್ಪಾಗಿದೆ. ಹತ್ತಿಯು ಅತ್ಯಂತ ಸೂಕ್ಷ್ಮ ಬೆಳೆಯಾಗಿದ್ದರಿಂದ ಹತ್ತಿ ಗಿಡದಲ್ಲಿನ ಎಲ್ಲ ಹಸಿರು ಕಾಯಿಗಳಿಗೂ ಮಳೆ ನೀರು ಸೇರಿ ಹಸಿರು ಕಾಯಿಯೊಳಗಿನ ಫಸಲು ಸಹ ಕೊಳೆತಿದೆ. ರೈತರಿಗೆ ಭಾರಿ ಅನ್ಯಾಯವಾಗಿದೆ. ನಮಗೆ ಸಮರ್ಪಕ ಪರಿಹಾರ ಕೊಡಿಸಬೇಕು. ತೊಗರಿ, ಜೋಳ ಸೇರಿದಂತೆ ಬೇರೆ ಬೇರೆ ಬೆಳೆಗಳಿಗು ಸಹ ಹಾನಿಯಾಗಿದೆ. ನಮಗೆ ಸಮರ್ಪಕ ಪರಿಹಾರ ಕೊಡಿಸಬೇಕು ಎಂದು ಇದೆ ವೇಳೆ ರೈತರು ಶಾಸಕರಲ್ಲಿ ಮನವಿ ಮಾಡಿದರು.
ಸರ್ಕಾರಕ್ಕೆ ವರದಿ: ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಬಹುತೇಕ ರೈತರು ಹತ್ತಿ ಬೆಳೆ ಬೆಳೆದಿದ್ದಾರೆ. ಒಂದು ಬಾರಿಯಾದರು ಹತ್ತಿ ಬಿಡಿಸದೇ ಇರುವಂತಹ ಸಂದರ್ಭದಲ್ಲಿ ಮಳೆ ಸುರಿದು ಮತ್ತು ಕೃಷ್ಣಾ ಹಾಗೂ ತುಂಗಾ ನದಿಗಳು ಉಕ್ಕಿ ಹರಿದು, ಹಳ್ಳ ಕೊಳ್ಳಗಳ ತುಂಬಿ ಜಮೀನಿಗೆ ನೀರು ನುಗ್ಗಿ ಫಸಲಿಗೆ ಹಾನಿಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇನ್ನು ಒಡೆಯದೇ ಇರುವ ಕಾಯಿಗಳು ಸಹ ಕೊಳೆತಿವೆ. ಇರುವ ಕಾಯಿಗಳು ಉದುರುತ್ತಿವೆ. ತಹಸೀಲ್ದಾರರು, ಕೃಷಿ, ತೋಟಗಾರಿಕಾ ಇಲಾಖೆ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಸಹಾಯಕರು ಸೇರಿದಂತೆ ಬೇರೆ ಬೇರೆ ಅಧಿಕಾರಿಗಳು ನಿರಂತರ ಕಾಲ ಅತಿವೃಷ್ಟಿಯಿಂದಾದ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷಾ ಕಾರ್ಯ ಆರಂಭಿಸಿದ್ದಾರೆ. ಈ ಬೆಳೆಹಾನಿಗೆ ಸಮರ್ಪಕ ಪರಿಹಾರವು ರೈತರಿಗೆ ಸಿಗಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ವರದಿಯನ್ನು ಸರ್ಕಾರಕ್ಕೆ ಕಳುಹಿಸುತ್ತಿದ್ದೇವೆ ಎಂದು ಶಾಸಕರು ರೈತರಿಗೆ ತಿಳಿಸಿದರು.
ರೈತರಿಗೆ ಸಹಾಯ ಮಾಡುವುದು ಆದ್ಯ ಕರ್ತವ್ಯ: ಅಂದಾಜು 6 ಸಾವಿರ ಎಕರೆ ಪ್ರದೇಶದಲ್ಲಿನ ಬೆಳೆಗೆ ಹಾನಿಯಾಗಿದೆ ಎಂದು ಈಗ ಮೊದಲ ಹಂತದಲ್ಲಿ ಅಂದಾಜಿಸಲಾಗಿದೆ. ಇನ್ನೂ ಸರ್ವೆ ಕಾರ್ಯ ಪ್ರಗತಿಯಲ್ಲಿದ್ದು ಪ್ರತಿ ಎರಡು ಮೂರು ದಿನಗಳಿಗೊಮ್ಮೆ ತಾಲೂಕು ತಹಸೀಲ್ದಾರರು ಜಿಲ್ಲಾಧಿಕಾರಿಗಳ ಕಚೇರಿಗೆ ಬೆಳೆಹಾನಿಯ ಪ್ರಮಾಣದ ಬಗ್ಗೆ ವರದಿ ಮಾಡುತ್ತಿದ್ದಾರೆ. ಹಾನಿಗೊಳಗಾದ ಪ್ರದೇಶದ ಪ್ರಮಾಣ ಇನ್ನು ಹೆಚ್ಚಾಗಲಿದೆ ಎಂದ ಶಾಸಕರು, ಈ ಬಾರಿ ನಮ್ಮ ತಾಲೂಕಿನಲ್ಲಿ ಬಂಪರ್ ಬೆಳೆ ಬಂದಿತ್ತು. ಪ್ರಕೃತಿ ವಿಕೋಪಗಳುಂಟಾದಾಗ ಈ ರೀತಿ ಹಾನಿಯಾಗುತ್ತದೆ. ರೈತರಿಗೆ ಸಹಾಯ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಫ್ ಮಾರ್ಗಸೂಚಿ ಪ್ರಕಾರ ರೈತರಿಗೆ ಸೂಕ್ತ ಪರಿಹಾರ ಒದಗಿಸುತ್ತೇವೆ. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಕಲಬುರಗಿ ಜಿಲ್ಲೆಯಲ್ಲಿ ಹೇಳಿದಂತೆ ರೈತರಿಗೆ ಎನ್‌ಡಿಆರ್‌ಫ್ ಮಾರ್ಗಸೂಚಿಯ ಪರಿಹಾರ ಧನದ ಜೊತೆಗೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನ ಕೊಡುವ ಬಗ್ಗೆ ಸರ್ಕಾರದಿಂದ ಆದೇಶವಾಗಲಿದೆ. ರೈತರು ಧೈರ್ಯದಿಂದ ಇರಬೇಕು ಎಂದು ಶಾಸಕರು ರೈತರಿಗೆ ಧೈರ್ಯ ತುಂಬಿದರು.
ಅಧಿಕಾರಿಗಳಿಗೆ ಸೂಚನೆ: ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ರಾಯಚೂರು ತಾಲೂಕುಮಟ್ಟದ ಕೃಷಿ, ತೋಟಗಾರಿಕೆ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಎಲ್ಲ ಅಧಿಕಾರಿಗಳು ಈ ಸಂದರ್ಭದಲ್ಲಿ ಜಾಗೃತೆಯಿಂದ ಕೆಲಸ ಮಾಡಬೇಕು. ಪ್ರತಿಯೊಬ್ಬರು ರೈತರ ಬೇಡಿಕೆಗಳಿಗೆ ಸ್ಪಂದನೆ ನೀಡಬೇಕು. ಸಮೀಕ್ಷೆ ಅಚ್ಚುಕಟ್ಟಾಗಿ ನಡೆಯಬೇಕು. ಹಾನಿಗೊಳದ ಎಲ್ಲ ರೈತರಿಗೂ ನ್ಯಾಯ ಸಿಗಬೇಕು. ಎಲ್ಲ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಬೇಕು. ನಮ್ಮಲ್ಲಿ ಸಮೀಕ್ಷೆ ನಡೆಸಲು ಯಾರು ಬಂದಿಲ್ಲ ಎಂದು ಯಾವ ರೈತರು ದೂರು ನೀಡದಂತೆ ಅಧಿಕಾರಿಗಳು ಜಾಗೃತೆಯಿಂದ ಕೆಲಸ ಮಾಡಬೇಕು. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಕೇಂದ್ರ ಸ್ಥಾನದಲ್ಲಿದ್ದು ಕಾರ್ಯ ನಿರ್ವಹಿಸಬೇಕು ಎಂದು ಇದೆ ವೇಳೆ ಶಾಸಕರು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ರೋಗಾಭಾದೆ: ಅತಿಯಾದ ಮಳೆಯ ಜೊತೆಗೆ ರೋಗಬಾಧೆಯಿಂದಲೂ ಹತ್ತಿ ಬೆಳೆಗೆ ಹಾನಿಯಾಗಿದೆ ಎಂದು ಕೃಷಿ ಅಧಿಕಾರಿಗಳು ಇದೆ ವೇಳೆ ಶಾಸಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಸುರೇಶ ವರ್ಮಾ, ಕೃಷಿ ಅಧಿಕಾರಿ ದೀಪಾ, ತೋಟಗಾರಿಕಾ ಅಧಿಕಾರಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಮತ್ತು ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್