ನಾಗ್ಪುರ್, 02 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಡಾ. ಮೋಹನ್ ಭಾಗವತ್ ಗುರುವಾರ ರಾಷ್ಟ್ರದ ಏಕತೆಯ ಪ್ರಜ್ಞೆಯು ಸರ್ವವ್ಯಾಪಿಯಾಗಿದೆ ಮತ್ತು ಅದು ನಮ್ಮ ಗುರುತು ಎಂದು ಹೇಳಿದರು.
ಭಾರತವು ವೈವಿಧ್ಯತೆಯಿಂದ ತುಂಬಿರುವ ದೇಶ, ಆದರೆ ಸಮಾಜ, ರಾಷ್ಟ್ರ ಮತ್ತು ಸಂಸ್ಕೃತಿಯ ಮಟ್ಟದಲ್ಲಿ ನಾವೆಲ್ಲರೂ ಒಂದೇ ಎಂದು ಅವರು ಹೇಳಿದರು.
ಆರ್‌ಎಸ್‌ಎಸ್ ಸ್ಥಾಪನೆಯ 100 ನೇ ವರ್ಷಾಚರಣೆಯ ಅಂಗವಾಗಿ ನಾಗ್ಪುರ್ ದ ರೇಶಂಬಾಗ್ ಮೈದಾನದಲ್ಲಿ ನಡೆದ ವಿಜಯದಶಮಿ ಆಚರಣೆಯನ್ನುದ್ದೇಶಿಸಿ ಡಾ. ಭಾಗವತ್ ಮಾತನಾಡಿದರು.
ಇತ್ತೀಚಿನ ಪಹಲ್ಗಾಮ್ ದಾಳಿಯನ್ನು ಉಲ್ಲೇಖಿಸಿದ ಆರ್‌ಎಸ್‌ಎಸ್ ಮುಖ್ಯಸ್ಥರು, ಸಮಾಜದಲ್ಲಿ ದುಃಖ ಮತ್ತು ಕೋಪದ ಅಲೆ ಇತ್ತು, ಆದರೆ ಸರ್ಕಾರದ ಬಲವಾದ ಪ್ರತಿಕ್ರಿಯೆ ಮತ್ತು ಸಮಾಜದ ಐಕ್ಯತೆಯು ಬಿಕ್ಕಟ್ಟಿನ ಸಮಯದಲ್ಲಿ ಭಾರತವು ಇನ್ನಷ್ಟು ಒಗ್ಗಟ್ಟಾಗುತ್ತದೆ ಎಂಬುದನ್ನು ಸಾಬೀತುಪಡಿಸಿತು ಎಂದು ಹೇಳಿದರು.
ಭಾರತದ ಏಕೀಕೃತ ದೃಷ್ಟಿಕೋನ ಮಾತ್ರ ವಿಶ್ವದ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಒದಗಿಸುತ್ತದೆ ಎಂದು ಡಾ. ಭಾಗವತ್ ಹೇಳಿದರು. ರಾಜ್ಯಗಳು ಬದಲಾಗುತ್ತವೆ, ಆದರೆ ರಾಷ್ಟ್ರ ಶಾಶ್ವತವಾಗಿ ಉಳಿಯುತ್ತದೆ ಎಂದ ಅವರು ನಮ್ಮ ಏಕತೆಯ ಅಡಿಪಾಯವನ್ನು ನಾವು ಎಂದಿಗೂ ಮರೆಯಬಾರದು ಎಂದರು.
ಜಾಗತಿಕ ಪರಿಸ್ಥಿತಿಯನ್ನು ಉಲ್ಲೇಖಿಸುತ್ತಾ, ಡಾ. ಭಾಗವತ್ ಸ್ವಾವಲಂಬನೆ ಇಂದಿನ ಅಗತ್ಯ ಎಂದು ಕರೆದರು. ಜಗತ್ತು ಪರಸ್ಪರ ಅವಲಂಬನೆಯ ಮೇಲೆ ನಡೆಯುತ್ತದೆ, ಆದರೆ ನಾವು ಸ್ವಾವಲಂಬಿಗಳಾಗುವುದು ಬಲವಂತದಿಂದಲ್ಲ, ಬದಲಾಗಿ ಆಯ್ಕೆಯಾಗಿ ಇದನ್ನು ಸಾಧಿಸಲು ಸ್ವದೇಶಿ ಮತ್ತು ಸ್ವಾವಲಂಬನೆ ಮಾತ್ರ ಮಾರ್ಗಗಳು ಎಂದರು.
ಸಮಾಜದಲ್ಲಿ ಸಂಘದ ಕಾರ್ಯಗಳಲ್ಲಿ ಹೆಚ್ಚುತ್ತಿರುವ ಜಾಗೃತಿ ಮತ್ತು ಭಾಗವಹಿಸುವಿಕೆಯನ್ನು ಅವರು ಶ್ಲಾಘಿಸಿ. ಹೊಸ ಪೀಳಿಗೆಯ ದೇಶಭಕ್ತಿ ಮತ್ತು ಸಂಸ್ಕೃತಿಯ ಬಗ್ಗೆ ಭಕ್ತಿ ಸ್ಥಿರವಾಗಿ ಹೆಚ್ಚುತ್ತಿದೆ, ಸಾಮಾಜಿಕ ಸಂಸ್ಥೆಗಳು ಮತ್ತು ಅನೇಕ ವ್ಯಕ್ತಿಗಳು ಸಮುದಾಯಕ್ಕೆ ಸೇವೆ ಸಲ್ಲಿಸಲು ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು.
ಶಾಖೆಗಳ ಪಾತ್ರಗಳ ಕುರಿತು ಮಾತನಾಡಿದ ಸಂಘದ ಮುಖ್ಯಸ್ಥರು, ಅವು ಸಮಾಜದಲ್ಲಿ ಸದ್ಗುಣ ಮತ್ತು ಸಾಮೂಹಿಕತೆಯ ವಾತಾವರಣವನ್ನು ಬೆಳೆಸುತ್ತವೆ ಎಂದು ಹೇಳಿದರು. ಸ್ವಯಂಸೇವಕರು ಶಾಖೆಗಳ ಮೂಲಕ ತಮ್ಮ ನಡವಳಿಕೆಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತಾರೆ ಇದು ಸಂಘದ ಆತ್ಮ ಎಂದರು.
ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಪ್ರಾಂತೀಯ ಆರ್‌ಎಸ್‌ಎಸ್ ಮುಖ್ಯಸ್ಥ ದೀಪಕ್ ತಮ್ಶೆಟ್ಟಿವಾರ್ ಮತ್ತು ನಾಗ್ಪುರ ಮಹಾನಗರ ಆರ್‌ಎಸ್‌ಎಸ್ ಮುಖ್ಯಸ್ಥ ರಾಜೇಶ್ ಲೋಯಾ ವೇದಿಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa