ಅಹಮದಾಬಾದ್, 02 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾದ ಭಾರತ–ವೆಸ್ಟ್ ಇಂಡೀಸ್ ನಡುವಿನ ಎರಡು ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ, ಅತಿಥಿ ತಂಡದ ನಾಯಕ ರೋಸ್ಟನ್ ಚೇಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ತೀರ್ಮಾನಿಸಿದರು.
ಟಾಸ್ ಬಳಿಕ ಮಾತನಾಡಿದ ಚೇಸ್, “ಪಿಚ್ ಚೆನ್ನಾಗಿ ಕಾಣುತ್ತಿದೆ, ಮೊದಲ ಗಂಟೆಯಲ್ಲಿ ಸ್ವಲ್ಪ ತೇವಾಂಶ ಇರಬಹುದು. ಆದರೆ ನಂತರ ಬ್ಯಾಟಿಂಗ್‌ಗೆ ಅನುಕೂಲವಾಗಲಿದೆ. ಅಂತಿಮ ಇನ್ನಿಂಗ್ಸ್‌ನಲ್ಲಿ ಸ್ಪಿನ್ ಬೌಲಿಂಗ್ ಸವಾಲಾಗಬಹುದು, ಅದ್ದರಿಂದ ಮೊದಲು ರನ್‌ಗಳನ್ನು ಕಲೆಹಾಕುವುದು ಸೂಕ್ತ” ಎಂದು ಹೇಳಿದರು. ತಂಡವನ್ನು ಇಬ್ಬರು ವೇಗದ ಬೌಲರ್‌ಗಳು, ಇಬ್ಬರು ಸ್ಪಿನ್ನರ್‌ಗಳು ಹಾಗೂ ಒಬ್ಬ ಆಲ್‌ರೌಂಡರ್‌ನೊಂದಿಗೆ ಕಣಕ್ಕಿಳಿಸಿರುವುದಾಗಿ ತಿಳಿಸಿದರು.
ಭಾರತದ ನಾಯಕ ಶುಭಮನ್ ಗಿಲ್, “ಟಾಸ್ ಸೋತಿದ್ದರೂ ನಿರಾಶೆಯಿಲ್ಲ. ನಮ್ಮ ಆಟಗಾರರ ತಯಾರಿ ಉತ್ತಮವಾಗಿದೆ. ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗಿ ಕಾಣುತ್ತಿದೆ, ಆದರೆ ಆರಂಭಿಕ ಹಂತದಲ್ಲಿ ಬೌಲರ್‌ಗಳಿಗೆ ಸಹಾಯ ಮಾಡಬಹುದು” ಎಂದರು. ಈ ಸರಣಿಯನ್ನು ಗೆದ್ದು ವರ್ಷದ ಅಂತ್ಯದ ವೇಳೆಗೆ ನಡೆಯಲಿರುವ ನಾಲ್ಕು ಟೆಸ್ಟ್‌ಗಳಿಗೂ ತಯಾರಾಗುವುದೇ ತಂಡದ ಗುರಿ ಎಂದು ಅವರು ತಿಳಿಸಿದರು.
ವೆಸ್ಟ್ ಇಂಡೀಸ್ ತಂಡವು ಭಾರತವನ್ನು ಕೊನೆಯ ಬಾರಿ ಟೆಸ್ಟ್ ಪಂದ್ಯದಲ್ಲಿ ಸೋಲಿಸಿದದ್ದು ಮೇ 2002ರಲ್ಲಿ. ಅದಾದ ಬಳಿಕ ನಡೆದ 25 ಟೆಸ್ಟ್ ಪಂದ್ಯಗಳಲ್ಲಿ ಭಾರತ ಅಜೇಯವಾಗಿದೆ. ಇದು ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಅತಿ ಉದ್ದದ ಅಜೇಯ ಸರಣಿ.
ತಂಡಗಳ ವಿವರ;
ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಧ್ರುವ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ವೆಸ್ಟ್ ಇಂಡೀಸ್: ಟೆಗ್ ನರೈನ್ ಚಂದ್ರಪಾಲ್, ಜಾನ್ ಕ್ಯಾಂಪ್‌ಬೆಲ್, ಅಲಿಕ್ ಅಥಾನಾಸೆ, ಬ್ರಾಂಡನ್ ಕಿಂಗ್, ಶೈ ಹೋಪ್ (ವಿಕೆಟ್ ಕೀಪರ್), ರೋಸ್ಟನ್ ಚೇಸ್ (ನಾಯಕ), ಜಸ್ಟಿನ್ ಗ್ರೀವ್ಸ್, ಜೋಮೆಲ್ ವಾರಿಕನ್, ಖಾರಿ ಪಿಯರೆ, ಯೋಹಾನ್ ಲೇನ್, ಜೇಡನ್ ಸೀಲ್ಸ್.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa