ಗದಗ, 02 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದ ತಳಗೇರಿ ಬಡಾವಣೆಯಲ್ಲಿ ಅತಿ ಕ್ಷುಲ್ಲಕ ಕಾರಣವೆನಿಸಿದ ಸಿಗರೇಟ್ ಬಾಕಿ ಹಣವೇ ದೊಡ್ಡದೊಂದು ಸಂಘರ್ಷಕ್ಕೆ ಕಾರಣವಾಗಿದೆ. ಇದರಿಂದ ಹಿಂದೂ-ಮುಸ್ಲಿಂ ಯುವಕರು ಪರಸ್ಪರ ಹೊಡೆದಾಡಿಕೊಂಡ ಪರಿಣಾಮ ಪಟ್ಟಣದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.
ಘಟನೆಯ ಮೂಲ ಕಾರಣ
ಶಿರಹಟ್ಟಿ ಪಟ್ಟಣದ ತಳಗೇರಿ ಬಡಾವಣೆಯಲ್ಲಿ ಅಬ್ದುಲ್ ಘನಿ ಮಕಾಂದಾರ್ ಎನ್ನುವಾತ ಚಹಾ ಅಂಗಡಿ ನಡೆಸುತ್ತಿದ್ದ. ಅವನ ಅಂಗಡಿಗೆ ನಿತ್ಯ ದೇವಪ್ಪ ಪೂಜಾರ್ ಎನ್ನುವ ಯುವಕ ಬಂದು ಚಹಾ ಹಾಗೂ ಸಿಗರೇಟ್ ಸೇವಿಸುತ್ತಿದ್ದ. ನಿತ್ಯ ಬರುತ್ತಿದ್ದ ಕಾರಣ ಅಂಗಡಿ ಮಾಲೀಕನು ಉದ್ರಿ (ಬಾಕಿ) ಕೊಡಲು ಪ್ರಾರಂಭಿಸಿದ್ದ. ಹೀಗೆ ಆರು-ಏಳು ತಿಂಗಳಲ್ಲಿ ಬಾಕಿ ಹಣ 2,500 ರೂಪಾಯಿಗೆ ಏರಿದಂತೆ ಅಂಗಡಿ ಮಾಲೀಕ ಹೇಳಿಕೊಂಡಿದ್ದಾನೆ. ಆದರೆ ದೇವಪ್ಪನ ಅಂದಾಜು ಪ್ರಕಾರ ಕೇವಲ 800 ರೂಪಾಯಿ ಮಾತ್ರ ಬಾಕಿ ಇತ್ತು. ಈ ವ್ಯತ್ಯಾಸವೇ ಗಲಾಟೆಗೆ ದಾರಿ ಮಾಡಿಕೊಟ್ಟಿತು.
ಗಲಾಟೆಯಿಂದ ಸಂಘರ್ಷ
ಬಾಕಿ ಹಣ ಕೇಳಿದ ಸಂದರ್ಭದಲ್ಲಿ ಮಾತಿನ ಚಕಮಕಿ ಆರಂಭವಾಗಿ, ಅಬ್ದುಲ್ ಘನಿ ದೇವಪ್ಪನ ಮೇಲೆ ಹಲ್ಲೆ ಮಾಡಿದನೆಂದು ಹೇಳಲಾಗುತ್ತಿದೆ. ಇದಾದ ಬಳಿಕ ದೇವಪ್ಪ ತನ್ನ ಸಮುದಾಯದವರನ್ನು ಕರೆಸಿಕೊಂಡರೆ, ಅಬ್ದುಲ್ ಕೂಡ ತನ್ನ ಸಮುದಾಯದ ಯುವಕರನ್ನು ಕರೆಸಿಕೊಂಡಿದ್ದ. ಹೀಗೆ ನಡುರಸ್ತೆಯಲ್ಲೇ ಎರಡು ಗುಂಪುಗಳು ಮುಖಾಮುಖಿಯಾಗಿ ನೂಕಾಟ, ತಳ್ಳಾಟ, ಹೊಡೆದಾಟ ನಡೆಸಿದವು. ಕೆಲಕಾಲ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು.
ಗಾಯಗೊಂಡವರು
ಈ ಗಲಾಟೆಯಲ್ಲಿ ಅಬ್ದುಲ್ ಘನಿ ಮಕಾಂದಾರ್, ದೇವಪ್ಪ ಪೂಜಾರ್, ಪರಶುರಾಮ್ ಡೊಂಕಬಳ್ಳಿ, ಮೈಲಾರಪ್ಪ ಕಪ್ಪಣ್ಣವರ್, ರವಿ ಕಪ್ಪಣ್ಣವರ್ ಹಾಗೂ ವಿರುಪಾಕ್ಷ ಹಿರೇಮಠ ಗಾಯಗೊಂಡಿದ್ದು, ಎಲ್ಲರೂ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎರಡೂ ಪಕ್ಷಗಳ ಆರೋಪ
ಹಿಂದೂ ಯುವಕರು ನಮ್ಮ ಮೇಲೆ ಮುಸ್ಲಿಂ ಯುವಕರು ಗುಂಪಾಗಿ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೊಂದೆಡೆ, ಅಬ್ದುಲ್ ಘನಿಯ ಪತ್ನಿ ಮುಮ್ತಾಜ್ ದೇವಪ್ಪ ಅಂಗಡಿಯಲ್ಲೇ ಏಕವಚನದಲ್ಲಿ ಮಾತನಾಡಿ ಗಲಾಟೆ ಶುರುಮಾಡಿದ. ಈ ವೇಳೆ ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ ಎಂದು ಬೆದರಿಸಿದ್ದಾರೆ ಎಂದು ಆರೋಪಿಸಿದ್ದಾಳೆ.
ಪಟ್ಟಣದಲ್ಲಿ ಬಿಗುವಿನ ವಾತಾವರಣ
ಘಟನೆಯಿಂದಾಗಿ ಪಟ್ಟಣದಲ್ಲಿ ಕೆಲಕಾಲ ಉದ್ವಿಗ್ನತೆ ನಿರ್ಮಾಣವಾಗಿದ್ದು, ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಶಿರಹಟ್ಟಿಯಂತಹ ಶಾಂತಿಯುತ ಪಟ್ಟಣದಲ್ಲಿ ಇಂತಹ ಘಟನೆ ನಡೆಯುವುದರಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ.
ಸಿಗರೇಟ್ ಬಾಕಿ ಹಣದಂತಹ ಅತಿ ಚಿಕ್ಕ ಕಾರಣವೇ ಇಷ್ಟು ದೊಡ್ಡ ಗಲಾಟೆಗೆ ತಿರುಗಿರುವುದು ಕಳವಳಕಾರಿ ಸಂಗತಿ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಯ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP