ಚಿತ್ರದುರ್ಗ, 02 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸತ್ಯ ಹಾಗೂ ಅಹಿಂಸೆ ಎಂಬ ಅಸ್ತ್ರಗಳಿಂದ ಬ್ರಿಟೀಷರ ವಿರುದ್ದ ಹೋರಾಡಿದ ಮಹಾತ್ಮ ಗಾಂಧೀಜಿ, ಈ ಎರಡೂ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಇವರ ಹಾದಿಯಲ್ಲೇ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರು ನಡೆದರು. ನೈತಿಕ ರಾಜಕಾರಣಕ್ಕೆ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರು ಮಾದರಿಯಾಗಿದ್ದರು ಎಂದು ಚಿತ್ರದುರ್ಗ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಏರ್ಪಡಿಸಲಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಾಂಧೀಜಿಯವರ ಜೀವನವೇ ನಮಗೆಲ್ಲ ಸಂದೇಶ. ಸತ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಗಾಂಧೀಜಿಯವರು ನಡೆಸಿದ ಪ್ರಯತ್ನವನ್ನು ಅವರ ಆತ್ಮಕಥನದಲ್ಲಿ ನಾವು ಕಾಣಬಹುದು. ಹೋರಾಟದ ಜೊತೆಗೆ ವೈಯಕ್ತಿಕವಾಗಿ ಎದುರಿಸಿದ ದೌರ್ಬಲ್ಯಗಳ ಬಗ್ಗೆ ಆತ್ಮಚರಿತ್ರೆಯಲ್ಲಿ ನಿರ್ಭಯದಿಂದ ಹೇಳಿಕೊಂಡಿದ್ದಾರೆ. ನಾವೆಲ್ಲರು ಗಾಂಧೀ ಮಾರ್ಗದಲ್ಲಿ ಸಾಗಿದರೆ ನೈತಕವಾಗಿ ಬಲವಾಗಿರುವ ಸ್ವಸ್ಥ ಸಮಾಜವನ್ನು ನಿರ್ಮಿಸಬಹುದಾಗಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa