ಜಿಲ್ಲಾಡಳಿತದಿಂದ ಗಾಂಧೀಜಿ-ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ
ಪ್ರೋತ್ಸಾಹ
ಜಯಂತಿ


ವಿಜಯಪುರ, 02 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ಜೀವನದ ತತ್ವಗಳಂತೆ ನಡೆದು ಈ ದೇಶಕ್ಕೆ ಮಾದರಿಯಾಗಿದ್ದಾರೆ. ಅವರು ಈ ದೇಶಕ್ಕೆ ತಮ್ಮ ಸಂದೇಶದ ಮೂಲಕ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ದೇಶದ ಈ ಮಹಾನ್ ವ್ಯಕ್ತಿಗಳ ತ್ಯಾಗ, ನಿಷ್ಠೆ, ಪ್ರಾಮಾಣಿಕತೆ, ಸತ್ಯ, ಅಹಿಂಸಾ, ಸರಳತೆಯ ತತ್ವಾದರ್ಶಗಳನ್ನು ಹಾಗೂ ಅವರ ಜೀವನದ ಸಂದೇಶ ಮೌಲ್ಯಗಳು ನಮಗೆ ಪ್ರೇರಣೆಯಾಗಿವೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ನಾನಾ ಇಲಾಖೆಗಳ ಸಹಯೋಗದಲ್ಲಿ ಗುರುವಾರ ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಆಯೋಜಿಸಲಾದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿ ಕಾರ್ಯಕ್ರಮದಲ್ಲಿ ಚರಕ ನೇಯುವ ಮೂಲಕ ವಿಶಿಷ್ಠವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಮಹನೀಯರ ಕುರಿತು ಇಂದಿನ ಯುವಕರು ಅಧ್ಯಯನ ಮಾಡುವ ಮೂಲಕ ಅವರ ಚಿಂತನೆಗಳನ್ನು ಹಾಗೂ ಅವರ ಬದುಕನ್ನು ಅರಿಯಬೇಕಾಗಿದೆ. ಎಂದೆಂದಿಗೂ ಅವರ ಕಾರ್ಯ ಸಾಧನೆಯ ಮೇರು ಆದರ್ಶ ವ್ಯಕ್ತಿತ್ವ, ಅವರ ಚಿಂತನೆ, ನಂಬಿದ್ದ ತತ್ವಾದರ್ಶಗಳು ದೇಶದ ನಾಗರಿಕರಿಗೆ ಅಚ್ಚಳಿಯದೇ ನೆನಪಿನಲ್ಲುಳಿದಿವೆ. ಗಾಂಧೀಜಿಯವರ ಸತ್ಯ, ಅಹಿಂಸೆ ಮೂಲಕ ಕೈಗೊಂಡ ಸತ್ಯಾಗ್ರಹ ಬಲಿಷ್ಠ ಮಾನವ ಸಂಪನ್ಮೂಲ ಹೊಂದಿದ್ದ ಬ್ರಿಟೀಷ ತಲೆಬಾಗಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿಯವರು ಚಿಂತನೆಗಳ ಜೊತೆಗೆ ಸತ್ಯಾಗ್ರಹ ನಡೆಸಿದ್ದರು. ಸತ್ಯಾಗ್ರಹದ ಮೂಲಕ ಸ್ವದೇಶಿ ತತ್ವ ನೀಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ತತ್ವಗಳಿಂದ ಜನರಿಗೆ ತಿಳಿಯುವ ಹಾಗೂ ಜನರಿಗೆ ಮನಮುಟ್ಟುವ ವಿಚಾರಗಳನ್ನು ತಿಳಿಸುತ್ತಿದ್ದರು. ಅಸಹಕಾರ ಚಳುವಳಿ, ಸ್ವದೇಶಿ ಬಟ್ಟೆ, ಖಾದಿ ಬಟ್ಟೆ ದೇಶೀಯ ವಸ್ತುಗಳ ಮಹತ್ವವನ್ನು ಅವರು ಸಾರಿದರು ಎಂದು ಅವರು ಹೇಳಿದರು.

ಮಹಾತ್ಮ ಗಾಂಧೀಜಿಯವರು ತಾವು ನಂಬಿದ್ದ ಚಿಂತನೆಗಳೊಂದಿಗೆ ಜನಸಾಮಾನ್ಯರಿಗೆ ತಿಳಿಸಿ, ಆ ದಿಸೆಯಲ್ಲಿ ಸಾಮಾನ್ಯ ಜನರನ್ನು ಜೊತೆಯಲ್ಲೆ ಕರದೊಯ್ದರು. ಸತ್ಯ, ಪ್ರಾಮಾಣಿಕತೆ, ಸ್ವಾವಲಂಬನೆ, ಸಂಘರ್ಷ ನಿವಾರಣೆ, ಕರುಣೆ, ದಯೆಯಂತಹ ತತ್ವಗಳು ಇಂದಿಗೂ ಪ್ರಸ್ತುತ ಎನಿಸಿವೆ. ಗಾಂಧೀಜಿಯವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ದೇಶದ ಜನತೆಯಲ್ಲಿ ಒಗ್ಗಟ್ಡಿನ ಮಹತ್ವ ಸಾರಿದರು. ಇವರ ತತ್ವಗಳನ್ನು ಬೇರೆ ಬೇರೆ ದೇಶಗಳು ಅಳವಡಿಸಿಕೊಂಡಿದ್ದಾರೆ. ಅಸ್ಪ್ಶಶ್ಯ್ಯತೆ ನಿವಾರಣೆಗೆ ಶ್ರಮಿಸಿದರು. ಗ್ರಾಮೀಣ ಗುಡಿ ಕೈಗಾರಿಕೆಗೆಳ ಉತ್ಥಾನಕ್ಕೆ ಪ್ರೋತ್ಸಾ ಹಿಸಿದರು. ಸಾಮಾನ್ಯರನ್ನು ಒಗ್ಗೂಡಿಸಿಕೊಂಡು ದೇಶದ ಸ್ವಾತಂತ್ರ್ಯಕ್ಕಾಗಿ ಧುಮುಕಿದರು ಎಂದು ಅವರು ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ಮಹತ್ವರ ಪಾತ್ರ ವಹಿಸಿ ಸತ್ಯ, ಅಹಿಂಸೆಯ ಹೋರಾಟದ ಹಾದಿ ಅನುಸರಿಸಿ ವಿಶ್ವಕ್ಕೆ ದೊಡ್ಡ ಸಂದೇಶ ಸಾರಿದವರು ಮಹಾತ್ಮ ಗಾಂಧೀಜಿಯವರು. ತ್ಯಾಗ, ಸತ್ಯ, ಅಹಿಂಸೆಯಂತಹ ಇವರ ವಿಚಾರಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿವೆ ಹಾಗೂ ನೆಮ್ಮೆಲ್ಲರಿಗೂ ದಾರಿದೀಪವಾಗಿವೆ ಎಂದು ಅವರು ಹೇಳಿದರು.

ಲಾಲ್ ಬಹದ್ದೂರ ಶಾಸ್ತ್ರೀಜಿಯವರು ನೀಡಿದ ಜೈ ಜೈವಾನ್ ಜೈ ಕಿಸಾನ್ ಘೋಷವಾಕ್ಯ ರೈತ ಹಾಗೂ ಸೈನಿಕರ ಬಗೆಗಿನ ಅಪಾರ ಕಾಳಜಿಗೆ ದ್ಯೋತಕವಾಗಿದೆ. ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜೀವನಾದರ್ಶಗಳು ನಮ್ಮೆಲ್ಲರ ಬದುಕಿಗೆ ಸ್ಪೂರ್ತಿದಾಯಕವಾಗಿವೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಮಾತನಾಡಿ, ಗಾಂಧೀಜಿಯವರನ್ನು ಇಡೀ ಜಗತ್ತು ಗೌರವಿಸುತ್ತದೆ. ಸತ್ಯವೇ ದೇವರು ಎಂಬುದನ್ನು ತಿಳಿಸಿದರು.ಪ್ರಾಮಾಣಿಕೆ ಹಾಗೂ ನೈತಿಕತೆಯನ್ನು ಮಕ್ಕಳಲ್ಲಿ ಬೆಳೆಸಬೇಕು.ಶಾಸ್ತ್ರಿ ಹಾಗೂ ಗಾಂಧಿ ಅವರು ಆದರ್ಶಪ್ರಾಯರಾಗಿದ್ದಾರೆ. ವಿಶ್ವಸಂಸ್ಥೆಯು ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯನ್ನು ಅಹಿಂಸಾ ದಿನಾಚರಣೆಯನ್ನಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸುತ್ತಿರುವುದು ವಿಶ್ವ ಅವರನ್ನು ಗೌರವಿಸುವ ಪರಿಯಾಗಿದೆ ಎಂದು ಹೇಳಿದರು.

ಅಹಿಂಸಾ ತತ್ವಗಳಿಂದ ಆತ್ಮಬಲ ಮುಖ್ಯವಾಗಿತ್ತು. ತ್ಯಾಗ ಬಲಿದಾನಗಳಿಂದ ದೊರಕಿದ ಸ್ವಾತಂತ್ರ್ಯದ ಹಿನ್ನೆಲೆ ಅರಿಯಬೇಕು. ಶಾಸ್ತ್ರಿ ಅವರ ಸರಳತೆ ಹಾಗೂ ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು. ಮಹನೀಯರ ಜೀವನದ ತತ್ವಗಳನ್ನು ಸ್ಮರಿಸಲು ಹಾಗೂ ಅವರಿಗೆ ಗೌರವ ಅರ್ಪಿಸಲು ಜಯಂತಿ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲಿದ್ದ ಮಹಾತ್ಮ ಗಾಂಧಿ ಅವರು ದೇಶಾದ್ಯಂತ ಸಂಚರಿಸಿ ಜನರ ಸಮಸ್ಯೆ ಅರಿತು ಅವಿರತವಾಗಿ ಶ್ರಮಿಸಿದರು ಎಂದು ಅವರು ಹೇಳಿದರು.

ಉಪನ್ಯಾಸ ನೀಡಿದ ಸಂಗಮೇಶ ಮೇತ್ರಿ ಅವರು ಮಾತನಾಡಿ, ಗಾಂಧಿಜಿಯವರ ಚಿಂತನೆಗಳನ್ನು ಅಳವಡಿಸಿಕೊಂಡರೆ ತಂಪೆರೆಯಬಹುದು.ಗಾಂಧಿಜಿಯವರ ಬದುಕನ್ನು ಅವರ ಚಿಂತನಗಳ ಓದಿನ ಅಗತ್ಯವಿದೆ. ಔದ್ಯೋಗಿಕರಣದಲ್ಲಿ ಗಾಂಧೀಜಿ ಚಿಂತನೆ ಬಹು ಪ್ರಸ್ತುತವಾಗಿವೆ. ಯುವಜನರು ದಾರ್ಶನಿಕರ ವಿಚಾರಗಳನ್ನು ತಿಳಿದುಕೊಳ್ಳಬೇಕು. ಗಾಂಧೀಜಿಯವರ ಸತ್ಯ ಮತ್ತು ಪ್ರೇಮ ಇವೆರಡು ವಿಚಾರ ಅನುಸರಿಸೋಣ, ಗಾಂಧಿಜಿಯವರು ಸತ್ಯ,ಪ್ರಾಮಾಣಿಕತೆಯನ್ನು ಬಾಲ್ಯದಲ್ಲಿಯೇ ಮೈಗೂಡಿಸಿಕೊಂಡಿದ್ದರು. ಗಾಂಧೀಜಿವರು ಬಹಳ ಸ್ವಾಭಿಮಾನಿಯಾಗಿದ್ದ ಅವರು, ಸ್ವಚ್ಛತೆಯನ್ನು ಬಹು ಅದ್ಯತೆಯನ್ನಾಗಿಸಿದ್ದ ಅವರು, ಸ್ವಚ್ಛತೆ ನಿರ್ಮಲ ಮನಸ್ಸನ್ನು ಕಟ್ಟಿಕೊಡುತ್ತದೆ ಎಂಬುದನ್ನು ಅವರು ನಂಬಿದ್ದರು ಸತ್ಯ ಹಾಗೂ ಪ್ರೇಮವನ್ನು ಬೋಧಿಸಿದರು ಎಂದು ಹೇಳಿದರು.

ಶ್ರೀಮತಿ ಕವಿತಾ ಕಲ್ಯಾಣಪ್ಪಗೋಳ ಅವರು, ಲಾಲ್ ಬಹಾದ್ದೂರ ಶಾಸ್ತ್ರಿ ಅವರ ಕುರಿತು ಉಪನ್ಯಾಸ ನೀಡಿ, ಸರಳತೆ, ಸಜ್ಜನಿಕೆ, ಸಹಿಷ್ಣುತೆ, ಪ್ರಾಮಾಣಿಕತೆ, ಸ್ವಾಭಿಮಾನಿ, ಕುಶಾಗ್ರಮತಿಯಾಗಿದ್ದ ದೇಶಭಿಮಾನಿ. ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದ ಶಾಸ್ತ್ರಿ ಅವರು ಅಸಾಮಾನ್ಯ ಕಾರ್ಯನಿರ್ವಹಿಸಿ, ಸರಳತೆ, ಆದರ್ಶ ವಿಚಾರಗಳಿಂದ ಇಂದಿಗೂ ಜನಮಾನಸದಲ್ಲಿ ನೆಲೆ ನಿಂತಿದ್ದಾರೆ. ರೈತರಿಗೆ ಮಾದರಿಯಾಗಿದ್ದಾರೆ. ಅವರು ಸ್ವಾವಲಂಬಿಯಾಗಿ ಬದುಕಲು ಪ್ರೇರೆಪಣೆ ನೀಡಿದರು. ಕೃಷಿಯೊಂದಿಗೆ ಹೈನುಗಾರಿಕೆಗೂ ಒತ್ತು ನೀಡಿದ್ದರು. ಹಸಿರು ಕ್ರಾಂತಿ ಹಾಗೂ ಶ್ವೇತಕ್ರಾಂತಿಗೆ ಮುನ್ನುಡಿ ಬರೆದರು.ಭಾರತೀಯರಿಗೆ ಸ್ವಾಭಿಮಾನದ ಪ್ರತೀಕವಾಗಿದ್ದ ಅವರ ಒಂದು ದಿನ ಉಪವಾಸದ ಕರೆಗೆ ಇಡೀ ದೇಶದ ಜನ ಅನುಸರಿಸಿದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರ ನಾಯಕರ ವೇಷ ತೊಟ್ಟ ಚಿಕ್ಕ ಮಕ್ಕಳು ಪ್ರೇಕ್ಷಕರ ಕಣ್ಮನ ಸೆಳೆದರು. ರಘುಪತಿ ರಾಘವ ಹಾಗೂ ವೈಷ್ಣವ ಜನತೋ ಎಂಬ ಗಾಂಧಿಜಿಯವರ ಪ್ರಿಯ ಭಜನೆಗಳನ್ನು ವಿರೇಶ ವಾಲಿ ಹಾಗೂ ತಂಡದವರು ಅತ್ಯಂತ ಸುಶ್ರಾವ್ಯವಾಗಿ ಹಾಡಿದರು.

ಕಾರ್ಯಕ್ರಮಕ್ಕೂ ಮೊದಲು, ನಗರದ ಸೈನಿಕ ಶಾಲೆ ಹತ್ತಿರ ಇರುವ ಲಾಲಬಹಾದ್ದೂರ ಶಾಸ್ತ್ರೀಜಿಯವರ ಪುತ್ಥಳಿಗೆ ಹಾಗೂ ನಗರದ ಹೃದಯಭಾಗದ ಗಾಂಧಿವೃತ್ತದ ಗಾಂಧೀ ಪ್ರತಿಮೆಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.ನಗರದ ಜಲನಗರ ರಸ್ತೆಯಲ್ಲಿರುವ ಬುದ್ಧ ವಿಹಾರದಿಂದ ಗಾಂಧಿ ಭವನದವರೆಗೆ ಸ್ವಚ್ಛತಾ ನಡಿಗೆ ಜಾಥಾ ಮೂಲಕ ಸ್ವಚ್ಛತೆಯ ಮಹತ್ವದ ಕುರಿತು ಸಾರಲಾಯಿತು.

ಮಹಾತ್ಮ ಗಾಂಧೀಜಿ ಅವರ 156ನೇ ಜಯಂತಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿ ಡಾ. ಆನಂದ.ಕೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಚರಕ ನೇಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆ, ಗಾಂಧೀಜಿಯವರ ಪ್ರಿಯ ಭಜನೆಗಳ ಗೀತಗಾಯನವೂ ನಡೆಯಿತು. ಕಾರ್ಯಕ್ರಮದಲ್ಲಿ ಛದ್ಮ ವೇಷಧಾರಿಯಾಗಿ ಬಂದ ಮಕ್ಕಳು ಕಾರ್ಯಕ್ರಮದ ಆಕರ್ಷಣೀಯ ಕೇಂದ್ರ ಬಿಂದುವಾಗಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande