ಗೋವಿನಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ಅನ್ನದಾತರ ಒತ್ತಾಯ
ಗದಗ, 02 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಕೃಷಿಕರು ಈ ಬಾರಿಯ ಮುಂಗಾರಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಗೋವಿನಜೋಳ ಬಿತ್ತನೆ ಮಾಡಿದ್ದರು. ಮುಂಗಾರು ಪ್ರಾರಂಭದಲ್ಲಿ ಸುರಿದ ಭರ್ಜರಿ ಮಳೆಯಿಂದ ಹೊಲಗಳು ಹಸಿರಿನಿಂದ ಕಂಗೊಳಿಸಿದವು. ಗಿಡಗಳು ಸಮೃದ್ಧವಾಗಿ ಬೆಳೆಯುತ್ತಾ ರೈತರ ಕಣ್ಮುಂದೆ ಬಂಗಾರದ ಕ
ಪೋಟೋ


ಗದಗ, 02 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಕೃಷಿಕರು ಈ ಬಾರಿಯ ಮುಂಗಾರಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಗೋವಿನಜೋಳ ಬಿತ್ತನೆ ಮಾಡಿದ್ದರು. ಮುಂಗಾರು ಪ್ರಾರಂಭದಲ್ಲಿ ಸುರಿದ ಭರ್ಜರಿ ಮಳೆಯಿಂದ ಹೊಲಗಳು ಹಸಿರಿನಿಂದ ಕಂಗೊಳಿಸಿದವು. ಗಿಡಗಳು ಸಮೃದ್ಧವಾಗಿ ಬೆಳೆಯುತ್ತಾ ರೈತರ ಕಣ್ಮುಂದೆ ಬಂಗಾರದ ಕನಸು ಮೂಡಿಸಿತು. ಆದರೆ, ಕಟಾವು ಮಾಡಬೇಕಾದ ಅವಧಿಯಲ್ಲೇ ಸುರಿದ ಮಳೆ ರೈತರ ಕನಸುಗಳಿಗೆ ಕಡಿವಾಣ ಹಾಕಿದೆ. ಅತಿವೃಷ್ಟಿಯಿಂದ ಸಾಕಷ್ಟು ಪ್ರದೇಶಗಳಲ್ಲಿ ಬೆಳೆ ಹಾನಿಗೊಂಡಿದ್ದು, ಉಳಿದ ಬೆಳೆಗೂ ಮಾರುಕಟ್ಟೆಯಲ್ಲಿ ಸಮರ್ಪಕ ಬೆಲೆ ಸಿಗದೇ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಗದಗ ಜಿಲ್ಲೆಯ ಏಳು ತಾಲೂಕುಗಳಲ್ಲಿ ಗೋವಿನಜೋಳವೇ ಪ್ರಮುಖ ಮುಂಗಾರು ಹಂಗಾಮಿನ ಬೆಳೆ. ರೈತರು ಹೂಡಿಕೆ ಮಾಡಿ ಬೆಳೆಸಿದ ಬೆಳೆ ಮಳೆಯಿಂದ ಹಾನಿಯಾಗಿದ್ದು, ಈಗಾಗಲೇ ಉಳಿದಿರುವ ಬೆಳೆ ಮಾರುಕಟ್ಟೆಗೆ ತಲುಪುತ್ತಿದ್ದಂತೆಯೇ 18 ನೂರು ರೂಪಾಯಿಗೂ ಕಡಿಮೆ ಬೆಲೆ ಸಿಗುತ್ತಿದೆ. ಹೀಗಾಗಿ ಸರ್ಕಾರ ತಕ್ಷಣವೇ ಗೋವಿನಜೋಳಕ್ಕೆ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕೆಂದು ಅನ್ನದಾತರು ಆಗ್ರಹಿಸಿದ್ದಾರೆ.

ರೈತರ ಪ್ರಕಾರ, ಪ್ರತಿ ಎಕರೆಗಿಂತಲೂ 20 ರಿಂದ 25 ಸಾವಿರ ರೂಪಾಯಿಗಳಷ್ಟು ವೆಚ್ಚ ಮಾಡಲಾಗಿದ್ದು, ಮಳೆಯಿಂದ ಆದ ಹಾನಿಯ ಬಳಿಕ ಆ ವೆಚ್ಚವನ್ನು ವಾಪಸು ಪಡೆಯುವ ಭರವಸೆ ಮಾರುಕಟ್ಟೆ ದರದಲ್ಲಿ ಇಲ್ಲ. ಬೆಂಬಲ ಬೆಲೆ ನೀಡಿದರೆ ಮಾತ್ರ ತಾವು ಬದುಕು ಸಾಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಈಗಾಗಲೇ ಜಿಲ್ಲೆಯಲ್ಲಿನ ಹೆಸರು ಮತ್ತು ಸೂರ್ಯಕಾಂತಿ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಅತೀ ಹೆಚ್ಚು ಪ್ರದೇಶದಲ್ಲಿ ಬೆಳೆದಿರುವ ಗೋವಿನಜೋಳವನ್ನು ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಮಾಡಲಾಗುತ್ತಿಲ್ಲ. ಇದು ರೈತರಲ್ಲಿ ಅಸಮಾಧಾನ ಮೂಡಿಸಿದೆ. ರೈತರ ಒತ್ತಾಯವೆಂದರೆ, ಪ್ರತಿ ಕ್ವಿಂಟಲ್‌ಗೆ ಕನಿಷ್ಠ 4 ಸಾವಿರ ರೂಪಾಯಿ ಬೆಂಬಲ ಬೆಲೆ ಘೋಷಿಸಬೇಕು ಹಾಗೂ ತಕ್ಷಣವೇ ಖರೀದಿ ಕೇಂದ್ರ ಆರಂಭಿಸಬೇಕು.

ಈಗಾಗಲೇ ಕಟಾವು ಕಾರ್ಯ ಪ್ರಾರಂಭವಾಗುತ್ತಿದೆ. ಖರೀದಿ ಕೇಂದ್ರ ಆರಂಭಿಸಿದರೆ ರೈತರಿಗೆ ತಾತ್ಕಾಲಿಕವಾದರೂ ಆಸರೆಯಾಗುತ್ತದೆ. ತಡವಾದರೆ ನಾವು ಉತ್ಪಾದಿಸಿದ ಧಾನ್ಯವು ಕಿಂಚಿತ್ ಬೆಲೆಯಲ್ಲಿಯೇ ಮಾರುಕಟ್ಟೆಗೆ ಹೋಗಿ ಬಿಡುತ್ತದೆ. ಹೀಗಾಗಿ ಇಂದೇ ನಿರ್ಧಾರ ಕೈಗೊಳ್ಳಬೇಕು ಎಂದು ಕೃಷಿಕರು ಒತ್ತಾಯಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಕೃಷಿ ಇಲಾಖೆಗೆ ರೈತರು ಮನವಿ ಸಲ್ಲಿಸಿದ್ದು, ಸರ್ಕಾರ ತಕ್ಷಣ ಸ್ಪಂದಿಸಬೇಕೆಂಬ ನಿರೀಕ್ಷೆಯಲ್ಲಿದ್ದಾರೆ. ರೈತರ ಬದುಕು ಉಳಿಸಲು ಗೋವಿನಜೋಳ ಖರೀದಿ ಕೇಂದ್ರ ಸ್ಥಾಪನೆ ಅವಶ್ಯಕವಾಗಿದ್ದು, ಆದಷ್ಟು ಬೇಗ ಖರೀದಿ ಕೇಂದ್ರವನ್ನು ಆರಂಭ ಮಾಡಬೇಕಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande