ಕೊಪ್ಪಳ, 02 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಇಲ್ಲಿನ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ.ಪಾರ್ವತಿ ಪೂಜಾರ (69) ಅವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದರು.ಅವರು ಕಳೆದ ಕೆಲವು ವರ್ಷಗಳಿಂದ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದರು.
ಸುಮಾರು 30 ವರ್ಷಗಳ ಕಾಲ ಸುದೀರ್ಘ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು ತಮ್ಮ ಬೋಧನೆಯಿಂದ ಅಪಾರ ಜನಪ್ರಿಯತೆ ಗಳಿಸಿದ್ದರು.
ಜೇಡರ ದಾಸಿಮಯ್ಯ, ಶಬ್ದಕ್ಕೆ ನಾಚಿದೊಡೆಂತಯ್ಯ, ಶಬ್ದಮಣಿದರ್ಪಣ ವಿವೇಚನೆ ಕೃತಿಗಳನ್ನು ಹೊರತಂದಿದ್ದಾರೆ. ಅನೇಕ ಸಂಪಾದನಾ ಗ್ರಂಥಗಳು, ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.
ಇವರು ಡಾ.ಡಿ.ವಿ.ಪರಶಿವಮೂರ್ತಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ದಾನಚಿಂತಾಮಣಿ ಅತ್ತಿಮಬ್ಬೆ ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿವಿಯು ಪಿಹೆಚ್.ಡಿ. ಪದವಿ ನೀಡಿತ್ತು. ಸಾಹಿತ್ಯ ಸಮ್ಮೇಳನಗಳು, ರಾಷ್ಟ್ರೀಯ ಗೋಷ್ಠಿಗಳು, ಕಾರ್ಯಾಗಾರಗಳಲ್ಲಿ ವಿದ್ವತ್ಪೂರ್ಣ ಉಪನ್ಯಾಸ ನೀಡಿದ್ದರು.ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರೂ ಆಗಿದ್ದರು.
ಮೃತರಿಗೆ ಪತಿ ರಾಮಚಂದ್ರ ಮಾರಾ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ.
ಶ್ರೀ ಗವಿಸಿದ್ದೆಶ್ವರ ಮಹಾಸ್ವಾಮಿಗಳು, ಮಾಜಿ ಸಂಸದ ಸಂಗಣ್ಣ ಕರಡಿ, ಸಾಹಿತಿ ಹೆಚ್.ಎಸ್.ಪಾಟೀಲ, ಪ್ರೊ.ಅಲ್ಲಮಪ್ರಭು ಬೆಟ್ಟದೂರ,ಪ್ರೊ.ಶಂಕ್ರಯ್ಯ ಅಬ್ಬಿಗೇರಿಮಠ, ಪ್ರೊ.ಶರಣಪ್ಪ ಬಿಳೇಯಲಿ, ಡಾ.ಸಿದ್ಧಲಿಂಗಪ್ಪ ಕೋಟ್ನೇಕಲ್, ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ, ಅನೇಕರು ಅಂತಿಮ ದರ್ಶನ ಪಡೆದರು.
ಕೊಪ್ಪಳದ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್