ಮೈಸೂರು, 02 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ನಾಡಹಬ್ಬ ದಸರಾದ ಭವ್ಯ ಸಮಾರೋಪದ ಅಂಗವಾಗಿ ಇಂದು ಸಂಜೆ ಮೈಸೂರಿನಲ್ಲಿ ನಡೆಯುವ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ.
ಈ ಬಾರಿ ಗಜಪಡೆಯ ನಾಯಕ ಅಭಿಮನ್ಯು ಆನೆ ಮೇಲೆ 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಸಾಗಲಿದೆ. ಇದು ನಾಡಿನ ಜನತೆಗೆ ಆಧ್ಯಾತ್ಮಿಕ, ಸಾಂಸ್ಕೃತಿಕ ದೃಷ್ಟಿಯಿಂದ ಅಪರೂಪದ ಕ್ಷಣವಾಗಲಿದೆ.
ಜಂಬೂ ಸವಾರಿ ಮಾರ್ಗ
ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಅಂಬಾವಿಲಾಸ ಅರಮನೆ ಮುಂಭಾಗ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡುವರು. ಬಳಿಕ ಅಭಿಮನ್ಯು ಆನೆ ಚಿನ್ನದ ಅಂಬಾರಿ ಹೊತ್ತು,
ಅರಮನೆ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಬಂಬೂ ಬಜಾರ್ ಮೂಲಕ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀ ದೂರ ಸಾಗಲಿದೆ.
ಆಕರ್ಷಕ ಸ್ತಬ್ಧ ಚಿತ್ರಗಳು, ವಿವಿಧ ಕಲಾತಂಡಗಳು, ನೃತ್ಯ-ಸಂಗೀತ ಕಾರ್ಯಕ್ರಮಗಳು ಮೆರವಣಿಗೆಗೆ ಮೆರುಗು ನೀಡಲಿವೆ.
ಜಂಬೂ ಸವಾರಿ ವೀಕ್ಷಣೆಗೆ ಅಂಬಾವಿಲಾಸ ಅರಮನೆ ಮುಂಭಾಗದಲ್ಲಿ 45 ಸಾವಿರ ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಅಂಬಾರಿ ಸಾಗುವ ಮಾರ್ಗದುದ್ದಕ್ಕೂ ರಸ್ತೆ ಎರಡೂ ಬದಿಗಳಲ್ಲಿ ಪ್ರೇಕ್ಷಕರಿಗಾಗಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ರಾತ್ರಿ 7 ಗಂಟೆಗೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ನಡೆಯಲಿದ್ದು, ಅದರಿಂದ ದಸರಾ ಸಮಾರಂಭಕ್ಕೆ ಅಂತಿಮ ತೆರೆ ಬೀಳಲಿದೆ
ಜಂಬೂ ಸವಾರಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ 6,384 ಪೊಲೀಸರನ್ನು ಮೈಸೂರಿನ ಭದ್ರತೆಗೆ ನಿಯೋಜಿಸಲಾಗಿದೆ, 30 ಸಾವಿರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳು ಅಳವಡಿಸಲಾಗಿದೆ. ಜಂಬೂ ಸವಾರಿಯ ಸುತ್ತಲೂ ಕಮಾಂಡೋಗಳ ಕಾವಲು ಇರಲಿದೆ. 10 ಕಡೆಗಳಲ್ಲಿ ಸಹಾಯವಾಣಿ ಕೇಂದ್ರಗಳು ತೆರೆಯಲಾಗಿದೆ.
ನೂಕುನುಗ್ಗಲು ತಪ್ಪಿಸಲು ಎಚ್ಚರಿಕಾ ಫಲಕಗಳನ್ನು ಹಾಕಲಾಗಿದ್ದು, ತುರ್ತು ಪರಿಸ್ಥಿತಿಗೆ ಪ್ರತಿಕ್ರಿಯಿಸಲು ಆಂಬ್ಯುಲೆನ್ಸ್ ಹಾಗೂ ವೈದ್ಯಕೀಯ ತಂಡಗಳು ನಿಯೋಜಿಸಲಾಗಿದೆ. ಪ್ರವೇಶ ಪತ್ರ ಇಲ್ಲದವರಿಗೆ ಪ್ರವೇಶವಿಲ್ಲ ಎಂದು ಜಿಲ್ಲಾಡಳಿತ ಹಾಗೂ ಪೊಲೀಸರು ಸ್ಪಷ್ಟ ಸೂಚನೆ ನೀಡಿದ್ದಾರೆ.
ಮೈಸೂರು ನಗರದ ಎಲ್ಲಾ ಭಾಗಗಳಲ್ಲಿ ಭದ್ರತೆ, ಸಾರಿಗೆ, ಆರೋಗ್ಯ ಹಾಗೂ ತುರ್ತು ಸೇವೆಗಳ ಸಮಗ್ರ ವ್ಯವಸ್ಥೆಯೊಂದಿಗೆ ನಾಡಹಬ್ಬ ಮೈಸೂರು ದಸರಾ ಇಂದು ತನ್ನ ಭವ್ಯ ಸಮಾರೋಪವನ್ನು ಕಾಣಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa