ಕೇಪ್ ಟೌನ್, 15 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : 2010 ರ ನಂತರದ ದೀರ್ಘ ನಿರೀಕ್ಷೆಗೆ ತೆರೆ ಎಳೆಯುತ್ತಾ ದಕ್ಷಿಣ ಆಫ್ರಿಕಾ ಫುಟ್ಬಾಲ್ ತಂಡವು ಮತ್ತೆ ಫಿಫಾ ವಿಶ್ವಕಪ್ ವೇದಿಕೆಗೆ ಕಾಲಿಡಲು ಸಜ್ಜಾಗಿದೆ. ಮಂಗಳವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ರುವಾಂಡಾವನ್ನು 3–0 ಅಂತರದಿಂದ ಸೋಲಿಸಿ ತಂಡವು 2026 ರ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ.
ಗುಂಪು ‘ಸಿ’ಯಲ್ಲಿ ಅಗ್ರಸ್ಥಾನ ಪಡೆದ ದಕ್ಷಿಣ ಆಫ್ರಿಕಾ ಅತ್ಯುತ್ತಮ ಪ್ರದರ್ಶನದ ಮೂಲಕ ಅಂತಿಮ ಸುತ್ತಿಗೆ ಮುನ್ನಡೆದಿದೆ. ನೈಜೀರಿಯಾ ತಂಡವೂ ಬೆನಿನ್ ವಿರುದ್ಧ 4–0 ಅಂತರದ ಗೆಲುವು ಸಾಧಿಸಿ ದಕ್ಷಿಣ ಆಫ್ರಿಕಾ ಮುನ್ನಡೆಗೆ ಸಹಕಾರಿಯಾಯಿತು.
ಪಂದ್ಯದ ಆರಂಭದಲ್ಲೇ ಥಲಾಂಟೆ ಎಂಬಾತಾ ಐದನೇ ನಿಮಿಷದಲ್ಲೇ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ನೀಡಿದರು. ಬಳಿಕ ಓಸ್ವಿನ್ ಅಪೋಲಿಸ್ 21ನೇ ನಿಮಿಷದಲ್ಲಿ ಮತ್ತು ಎವಿಡೆನ್ಸ್ ಮಕ್ಗೋಪೊ 72ನೇ ನಿಮಿಷದಲ್ಲಿ ಹೆಡರ್ ಮೂಲಕ ತಲಾ ಗೋಲು ಗಳಿಸಿ ಗೆಲುವು ಖಚಿತಪಡಿಸಿದರು.
ಕಳೆದ ತಿಂಗಳು ಅಮಾನತುಗೊಂಡ ಆಟಗಾರನನ್ನು ಮೈದಾನಕ್ಕಿಳಿಸಿದ್ದಕ್ಕಾಗಿ ಮೂರು ಅಂಕಗಳನ್ನು ಕಳೆದುಕೊಂಡಿದ್ದರೂ ದಕ್ಷಿಣ ಆಫ್ರಿಕಾ ಇದೀಗ ಅದನ್ನು ಹಿಂದೆ ಹಾಕಿ ಐತಿಹಾಸಿಕ ಹಿಂತಿರುಗುವಿಕೆಯನ್ನು ಸಾಧಿಸಿದೆ.
ನೈಜೀರಿಯಾ ಪರ ವಿಕ್ಟರ್ ಒಸಿಮ್ಹೆನ್ ಅದ್ಭುತ ಹ್ಯಾಟ್ರಿಕ್ ಗಳಿಸಿದರು – ಅವರು ಮೂರನೇ, 37ನೇ ಮತ್ತು ಎರಡನೇಾರ್ಧದ ಆರಂಭದಲ್ಲಿ ತಲಾ ಗೋಲು ಗಳಿಸಿದರು. ಕೊನೆಯ ಕ್ಷಣದಲ್ಲಿ ಫ್ರಾಂಕ್ ಒನ್ಯೆಕಾ ನಾಲ್ಕನೇ ಗೋಲು ಸೇರಿಸಿದರು.
ಇದಾವರೆಗೂ ಅಲ್ಜೀರಿಯಾ ಕೂಡ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಉಗಾಂಡಾ ವಿರುದ್ಧ 2–1 ಅಂತರದ ಗೆಲುವು ದಾಖಲಿಸಿದ ಅಲ್ಜೀರಿಯಾದ ಪರ ಮೊಹಮ್ಮದ್ ಅಮೌರಾ ಎರಡು ಪೆನಾಲ್ಟಿ ಗೋಲುಗಳನ್ನು ಗಳಿಸಿದರು. ಅಮೌರಾ ಇದೀಗ 10 ಗೋಲುಗಳೊಂದಿಗೆ ಆಫ್ರಿಕನ್ ಅರ್ಹತಾ ಸುತ್ತಿನ ಅಗ್ರ ಸ್ಕೋರರ್ ಆಗಿದ್ದಾರೆ.
ಅಲ್ಜೀರಿಯಾದ ಪರ ದಂತಕಥೆ ಜಿನೆದಿನ್ ಜಿಡಾನೆ ಅವರ ಪುತ್ರ ಲುಕಾ ಜಿಡಾನೆ ಮೊದಲ ಬಾರಿಗೆ ಗೋಲ್‌ಕೀಪರ್ ಆಗಿ ಮೈದಾನಕ್ಕಿಳಿದಿದ್ದಾರೆ. ಉಗಾಂಡಾ ಪರ ಸ್ಟೀವನ್ ಮುಕ್ವಾಲಾ ಆರಂಭದಲ್ಲೇ ಗೋಲು ಗಳಿಸಿದ್ದರೂ ಅಲ್ಜೀರಿಯಾ ಬಲವಾಗಿ ಹಿಂತಿರುಗಿತು.
ಈ ಮೂಲಕ ದಕ್ಷಿಣ ಆಫ್ರಿಕಾ, ನೈಜೀರಿಯಾ (ಪ್ಲೇಆಫ್ ಸಾಧ್ಯತೆ) ಹಾಗೂ ಅಲ್ಜೀರಿಯಾ ತಂಡಗಳು 2026 ರ ಫಿಫಾ ವಿಶ್ವಕಪ್‌ಗೆ ತಮ್ಮ ಬಲಿಷ್ಠ ಹಾದಿಯನ್ನು ನಿರ್ಮಿಸಿಕೊಂಡಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa