ಗದಗ, 14 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳ ಕುರಿತು ಸಾರ್ವಜನಿಕರು ನೀಡುವ ಯಾವುದೇ ದೂರಿಗೆ ಗ್ರಾಪಂ ಸಿಬ್ಬಂದಿ ವರ್ಗ ತಕ್ಷಣ ಸ್ಪಂದಿಸಬೇಕು ಎಂದು ಗಜೇಂದ್ರಗಡ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ, ಕಂದಕೂರು ಗ್ರಾಪಂ ಸಿಬ್ಬಂದಿಗೆ ಸೂಚಿಸಿದರು.
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಪಂ ಕಚೇರಿಯಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿಗಳ ಜೊತೆ ನಡೆಸಿದ ಸಭೆಯಲ್ಲಿ ಸಾರ್ವಜನಿಕ ಸ್ನೇಹಿಯಾಗಿ ಸಿಬ್ಬಂದಿಗಳು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಸೂಡಿ ಮತ್ತು ದ್ಯಾಮಹುಣಸಿ ಗ್ರಾಮಗಳಲ್ಲಿ ಗ್ರಾಮಸ್ಥರಿಗೆ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗಬೇಕು. ಮಲಪ್ರಭಾ ನೀರು ಬಿಡುಗಡೆ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡಬೇಕು. ಕುಡಿಯುವ ನೀರು ಎಲ್ಲೂ ಪೋಲಾಗದಂತೆ ನಿಗಾವಹಿಸಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಗ್ರಾಪಂ ಸಿಬ್ಬಂದಿ ಒದಗಿಸಬೇಕು. ಸರಿಯಾಗಿ ಕುಡಿಯುವ ನೀರು ಬಿಡದೇ ಸಾರ್ವಜನಿಕರಿಗೆ ಸ್ಪಂದಿಸದೇ ಇದ್ದರೆ ವಾಟರ್ ಮೆನ್ ಸಂಗಯ್ಯ ಅವರನ್ನು ಕೆಲಸದಿಂದ ತಗೆದುಹಾಕಿ ಅಂತ ಪಿಡಿಒ ಅವರಿಗೆ ಸೂಚಿಸಿದರು.
ಸಭೆಯಲ್ಲಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ರೋಣ ಮತ್ತು ಗಜೇಂದ್ರಗಡದ ಶಾಖಾಧಿಕಾರಿಗಳಾದ ಮಹದೇವಪ್ಪ ಅವರಿಗೆ ಸೂಡಿ ಗ್ರಾಮಕ್ಕೆ ಸರಬರಾಜಾಗುವ ಕುಡಿಯುವ ನೀರನ್ನು ವಿಳಂಬ ಮಾಡದೇ ಬಿಡಬೇಕು ಅಂತ ಸೂಚಿಸಿದರು.
ಗ್ರಾಪಂ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಬೀದಿ ದೀಪ ಬೆಳಗುವಂತಿರಬೇಕು. ಬೀದಿ ದೀಪದ ಕಂಬಗಳಲ್ಲಿ ಸಮರ್ಪಕ ವಿದ್ಯುತ್ ಸಂಪರ್ಕ, ವಿದ್ಯುತ್ ಬಲ್ಪಗಳ ಅಳವಡಿಕೆಗೆ ಕ್ರಮವಹಿಸಿಬೇಕೆಂದರು.
ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಬೀಸಾಡದಂತೆ ಜಾಗೃತಿವಹಿಸಬೇಕು. ಕಸ ವಿಲೇವಾರಿ ಕಾರ್ಯ ಪ್ರತಿನಿತ್ಯ ನಡೆಯಬೇಕು. ಅನಧಿಕೃತವಾಗಿ ಗೈರಾಗಿ ಕಸ ವಿಲೇವಾರಿ ಮಾಡದಿದ್ದರೆ ಅಂತಹ ಸಿಬ್ಬಂದಿಗಳ ವಿರುದ್ಧ ಪಿಡಿಒ ಅವರು ಕ್ರಮವಹಿಸಬೇಕು. ಇಲ್ಲವೇ ಪಿಡಿಒ ಅವರ ವಿರುದ್ಧ ನಾನು ಕ್ರಮವಹಿಸುವುದಾಗಿ ಎಚ್ಚರಿಸಿದರು.
ಸಭೆಯಲ್ಲಿ ಸೂಡಿ ಗ್ರಾಪಂ ಪಿಡಿಒ ಬಸವರಾಜ ವಡ್ಡರ, ತೆರಿಗೆ ಸಂಗ್ರಹಕಾರ ದುರ್ಗಪ್ಪ, ಪಂಚಾಯತ ಕಾರ್ಯದರ್ಶಿ ಮುಕ್ತಾಬಾಯಿ ಜಾದವ್, ವಾಟರ್ ಮ್ಯಾನ್ ಸಂಗಯ್ಯ ಮತ್ತು ಗ್ರಾಪಂ ಸಿಬ್ಬಂದಿ ವರ್ಗ ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP