ರೈತರಿಗೆ ಹೊಸ ತಂತ್ರಜ್ಞಾನ ಅರಿವು : ಯುವಕರು ಪಾತ್ರ ಅತಿ ಮುಖ್ಯ-ಡಾ. ಎಸ್. ವಿ. ಸುರೇಶ್
ಯುವಕರು ಹೊಸ ತಂತ್ರಜ್ಞಾನ ರೈತರಿಗೆ ತಿಳಿಸಿಕೊಡಿ ಸಲಹೆ
ಚಿತ್ರ : ಕೋಲಾರ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಕೃಷಿ ತಂತ್ರಜ್ಞಾನ ವಸ್ತು ಪ್ರದರ್ಶನವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ  ಕುಲಪತಿ ಡಾ. ಎಸ್. ವಿ. ಸುರೇಶ್ ಕೃಷಿ ತಂತ್ರಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.


ಕೋಲಾರ, ೧೪ ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕೃಷಿ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಹಾಗೂ ಅವುಗಳ ಅನುಷ್ಟಾನದಲ್ಲಿ ವಿದ್ಯಾರ್ಥಿಗಳು, ಯುವಕರ ಪಾತ್ರ ಅತಿ ಮುಖ್ಯವಾಗಿದ್ದು, ರೈತರಿಗೆ ಕೃಷಿ ಉತ್ಪನ್ನಗಳು, ನವೀನ ತಂತ್ರಜ್ಞಾನ, ವಿಜ್ಞಾನಾಧಾರಿತ ಕೃಷಿ ವಿಧಾನಗಳ ಕುರಿತು ಮಾಹಿತಿ ನೀಡಿ ಸಮಗ್ರ ಕೃಷಿ ಪದ್ದತಿ ಅನುಸರಿಸಲು ಅರಿವು ಮೂಡಿಸಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ವಿ. ಸುರೇಶ್ ಕರೆ ನೀಡಿದರು.

ಕೋಲಾರ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಕೃಷಿ ತಂತ್ರಜ್ಞಾನ ವಸ್ತು ಪ್ರದರ್ಶನವನ್ನು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ರೇಷ್ಮೆಕೃಷಿ ಮಹಾವಿದ್ಯಾಲಯ, ಚಿಂತಾಮಣಿಯಲ್ಲಿ ನಾಲ್ಕು ವರ್ಷಗಳ ಅವಧಿಯ ಪದವಿ ಕೋರ್ಸುಗಳಾದ ಬಿ.ಎಸ್ಸಿ. ರೇಷ್ಮೆಕೃಷಿ ಮತ್ತು ಕೃಷಿ ವಿದ್ಯಾರ್ಥಿಗಳ ೨೦೨೫-೨೬ನೇ ಸಾಲಿನ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಡಿಯಲ್ಲಿ ನಡೆದ ಕೃಷಿ ತಂತ್ರಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಕೃಷಿ ಪದ್ದತಿಯಲ್ಲಿ ಇಂದು ಹೊಸ ಹೊಸ ತಂತ್ರಜ್ಞಾನದ ಅಳವಡಿಕೆ ನಡೆಯುತ್ತಿದೆ, ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳುವ ಪ್ರಯತ್ನ ಇಂದಿನ ಅಗತ್ಯವಾಗಿದೆ, ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರ ಕೊರತೆ ಕಾಡುತ್ತಿದೆ, ಕೃಷಿಯಲ್ಲಿ ಖರ್ಚು ಹೆಚ್ಚಳದಿಂದ ರೈತರು ಕೃಷಿಯಿಂದ ವಿಚಲಿತರಾ ಗದತೆ ಅವರಿಗೆ ತಂತ್ರಜ್ಞಾನದ ಅಳವಡಿಕೆ ಮೂಲಕ ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳಲು ಅರಿವು ನೀಡಬೇಕು ಎಂದರು.

ಕೋಲಾರ ಜಿಲ್ಲೆ ಕೃಷಿಗೆ ಹೆಚ್ಚು ಪ್ರಧಾನ್ಯ ವಾಗಿದೆ, ಇಲ್ಲಿನ ರೈತರು ಅತಿ ಶ್ರಮಜೀವಿಗಳು, ಬುದ್ದಿವಂತರು ಎಂದ ಅವರು, ಅವರಿಗೆ ಅಗತ್ಯ ಮಾರ್ಗದರ್ಶನ ನೀಡಬೇಕಿದೆ ಎಂದ ಅವರು, ಸಾವಯವ ಕೃಷಿಗೆ ಉತ್ತೇಜನ ನೀಡಬೇಕು, ಇಂದು ಅತಿಯಾದ ರಾಸಾಯನಿಕಗಳ ಬಳಕೆ ಯಿಂದ ಭೂಮಾಲಿನ್ಯವಾಗಿದೆ, ಇದರಿಂದ ಕೃಷಿಗೆ ಹಿನ್ನಡೆಯಾಗುವುದನ್ನು ತಪ್ಪಿಸಲು ಮಣ್ಣಿನ ಆರೋಗ್ಯ ಕಾಪಾಡುವುದರ ಕುರಿತು ತಿಳಿಸಿಕೊಡಿ ಎಂದರು.

ಚಿಂತಾಮಣಿ ರೇಷ್ಮೆಕೃಷಿ ಮಹಾವಿದ್ಯಾಲಯದ ಡೀನ್ ಡಾ. ವೆಂಕಟರಮಣ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಾರ್ಯಾನುಭವ ಕಾರ್ಯಕ್ರಮದ ಮೂಲಕ ಗ್ರಾಮೀಣ ರೈತರ ಮನಗೆಲ್ಲುವ ಕೆಲಸ ಮಾಡಿದ್ದಾರೆ, ಅನೇಕ ವಿಷಯಗಳಲ್ಲಿ ತಾಂತ್ರಿಕ ಅರಿವು ನೀಡಿದ್ದಾರೆ, ಇದನ್ನು ರೈತರು ಅಳವಡಿಸಿಕೊಳ್ಳಬೇಕು ಎಂದರು.

ರೇಷ್ಮೆ ಕೃಷಿ ಇಂದು ಅವಿಭಜಿತ ಜಿಲ್ಲೆಯ ಜೀವನಾಡಿಯಾಗಿದೆ, ಇದರಿಂದ ಆರ್ಥಿಕವಾಗಿ ರೈತರು ಬದುಕು ಕಟ್ಟಿಕೊಂಡಿದ್ದು, ಇದರಲ್ಲಿಯೂ ಹೊಸ ತಾಂತ್ರಿಕತೆಯನ್ನು ಕಾಲಕ್ಕೆ ತಕ್ಕಂತೆ ಅಳವಡಿಸಿಕೊಂಡು ಸಾಗಿದರೆ ಮಾತ್ರ ಲಾಭ ಸಾಧ್ಯ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಹೊಸ ತಂತ್ರಜ್ಞಾನಗಳ ಮಾಹಿತಿ ಮತ್ತು ನವೀನ ಕೃಷಿ ವಿಧಾನಗಳನ್ನು ರೈತರಿಗೆ ತಲುಪಿಸುವುದೇ ಆಗಿದ್ದು, ಇದರ ಪ್ರಯೋಜನವನ್ನು ರೈತರು ಪಡೆಯಬೇಕು, ಕೃಷಿ ಎಂದಿಗೂ ನಷ್ಟದ ಹಾದಿಯಲ್ಲ ಎಂಬುದನ್ನು ಸಾಬೀತು ಮಾಡೋಣ, ಕೃಷಿಕ ಆರ್ಥಿಕ ಸಬಲೀಕರಣಕ್ಕೆ ಈ ತಂತ್ರಜ್ಞಾನ ಬಳಕೆ ಮಾಡುವಂತೆ ಮಾಡೋಣ ಎಂದರು.

ಕೃಷಿ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಹಲವಾರು ಕೃಷಿ ಮತ್ತು ರೇಷ್ಮೆ ವಿಭಾಗಗಳ ಬಗ್ಗೆ ಅತಿಥಿಗಳಿಗೆ ಮತ್ತು ರೈತರಿಗೆ ಮಾಹಿತಿ ನೀಡಿದರು. ಕೃಷಿ ವಿಶ್ವವಿದ್ಯಾನಿಲಯದಿಂದ ಬಿಡುಗಡೆಯಾದ ನೂತನ ತಳಿಗಳು ಮತ್ತು ತಂತ್ರಜ್ಞಾನವನ್ನು ರೈತರಿಗೆ ಪರಿಚಯಿಸಲು ೧೬ ವಿವಿಧ ಬೆಳೆಗಳ ತಳಿಗಳನ್ನು ಒಳಗೊಂಡ ಖುಷ್ಕಿ ಬೇಸಾಯ ಬೆಳೆ ತಾಂತ್ರಿಕ ಉದ್ಯಾನವನವನ್ನು ಸ್ಥಾಪಿಸಲಾಗಿತ್ತು.

ಒಟ್ಟು ೫೦ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ರೈತರಿಗೆ ಕೃಷಿ ಉತ್ಪನ್ನಗಳು, ನವೀನ ತಂತ್ರಜ್ಞಾನಗಳು ಮತ್ತು ವಿಜ್ಞಾನಾಧಾರಿತ ಕೃಷಿ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.

ಜೊತೆಗೆ ಮಾನವ ಹಾಗೂ ಪಶು ವೈದ್ಯಕೀಯ ಶಿಬಿರವನ್ನು ಉಚಿತವಾಗಿ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕೃಷಿಜಂಟಿ ನಿರ್ದೇಶಕಿ ಎಂ.ಆರ್.ಸುಮಾ, ಡಾ.ಆರ್.ಕೆ. ನಾಯಕ್, ಡಾ. ವೆಂಕಟಚಲಪತಿ, ಡಾ. ಪಾಪಿರೆಡ್ಡಿ, ಎಂ. ಹಾಗೂ ಕಾರ್ಯಕ್ರಮದ ಸಂಯೋಜಕರಾದ ಡಾ. ಶ್ರೀನಿವಾಸ ರೆಡ್ಡಿ ಎಂ. ವಿ. ಮತ್ತು ಡಾ. ರಾಜೇಶ್, ಸಿ. ಎಂ. ಉಪಸ್ಥಿತರಿದ್ದರು. ಪ್ರದರ್ಶನವು ಗ್ರಾಮಸ್ಥರಲ್ಲಿ ಕೃಷಿಯ ಮೇಲೆ ಹೊಸ ಆಸಕ್ತಿ ಮತ್ತು ಅರಿವು ಮೂಡಿಸಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande