ಅ.17 ರಂದು ಮೈಸೂರಿನಲ್ಲಿ ಬೃಹತ್ ಉದ್ಯೋಗ ಮೇಳ : ಸಚಿವ ಶರಣ ಪ್ರಕಾಶ ಪಾಟೀಲ
ಮೈಸೂರು, 14 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಸಾಂಸ್ಕೃತಿಕ ರಾಜಧಾನಿ ಮೈಸೂರು ಜಿಲ್ಲೆಯ ಮಹಾರಾಜ ಕಾಲೇಜು‌ ಮೈದಾನದಲ್ಲಿ ಅಕ್ಟೋಬರ್ 17 ರಂದು ಮೈಸೂರು ವಿಭಾಗ ಮಟ್ಟದ ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಈಗಾಗಲೇ 24,000 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 221 ಕಂಪನಿಗಳು ಭಾಗವಹಿಸಲಿವೆ ಎಂದು ವೈದ
Job fair


ಮೈಸೂರು, 14 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಸಾಂಸ್ಕೃತಿಕ ರಾಜಧಾನಿ ಮೈಸೂರು ಜಿಲ್ಲೆಯ ಮಹಾರಾಜ ಕಾಲೇಜು‌ ಮೈದಾನದಲ್ಲಿ ಅಕ್ಟೋಬರ್ 17 ರಂದು ಮೈಸೂರು ವಿಭಾಗ ಮಟ್ಟದ ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಈಗಾಗಲೇ 24,000 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 221 ಕಂಪನಿಗಳು ಭಾಗವಹಿಸಲಿವೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ, ಸಚಿವ ಡಾ. ಶರಣಪ್ರಕಾಶ್ ಆರ್‌ ಪಾಟೀಲ್ ತಿಳಿಸಿದರು.

ಮೈಸೂರಿನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಚಿವರು ಮಾಹಿತಿ ನೀಡಿದರು.

ಉದ್ಯೋಗ ಮೇಳದಲ್ಲಿ ಭಾಗವಹಿಸಲು ಹಾಗೂ ನೇರವಾಗಿ ಕಾರ್ಯಕ್ರಮದ ದಿನದಂದು ಆಗಮಿಸಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ರಾಜ್ಯಾದ್ಯಾಂತ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವವರು https://udyogamela.ksdckarnataka.comಗೆ ಹೆಸರು ನೋಂದಾಯಿಸಿಕೊಳ್ಳಬಹುದು‌. ಹೆಚ್ಚಿನ ಅಭ್ಯರ್ಥಿಗಳು ಭಾಗವಹಿಸಿ ಉದ್ಯೋಗ ಮೇಳವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು

*45000 ಉದ್ಯೋಗ ಖಾಲಿ*

ಉದ್ಯೋಗ ಮೇಳದಲ್ಲಿ 221 ಕಂಪನಿಗಳು ಭಾಗವಹಿಸಲು ಹೆಸರು ನೋಂದಾಯಿಸಿಕೊಂಡಿದ್ದು, ಸ್ಥಳೀಯ ಕಂಪನಿಗಳು ಸಹ ಹೆಸರು ನೋಂದಾಯಿಸಿಕೊಂಡಿವೆ. ಉದ್ಯೋಗದಾತರು ಸುಮಾರು 45000 ಉದ್ಯೋಗ ಖಾಲಿ ಇರುವುದಾಗಿ ಮಾಹಿತಿ ನೀಡಿದ್ದು, ಅಭ್ಯರ್ಥಿಗಳ ಕೌಶಲ್ಯಗಳ ಮೇಲೆ ಕಂಪನಿಗಳು ಆಯ್ಕೆ ಮಾಡಿಕೊಳ್ಳಲಿವೆ ಎಂದು ಡಾ. ಪಾಟೀಲ್ ವಿವರಿಸಿದರು.

ಹೆಸರು ನೋಂದಾಯಿಸಿಕೊಂಡು ಉದ್ಯೋಗ ಮೇಳದಲ್ಲಿ ಭಾಗವಹಿಸಿದ ನಂತರ ಉದ್ಯೋಗ ಸಿಗದೇ ಇರುವ ಅಭ್ಯರ್ಥಿಗಳ ವಿವರವನ್ನು ಸಹ ಪಡೆದುಕೊಂಡು ಅವರಿಗೆ ಬೇಕಿರುವ ಕೌಶಲ್ಯಗಳ ಬಗ್ಗೆ ತರಬೇತಿಯನ್ನು ನೀಡಲಾಗುವುದು. ಇದರಿಂದ ಮುಂದಿನ ದಿನಗಳಲ್ಲಿ ಅವರು ಸಹ ಉದ್ಯೋಗ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದರು‌.

ಯುವ ನಿಧಿ ಪ್ಲಸ್‌ ಯೋಜನೆಯಡಿ ತರಬೇತಿ

ಯುವನಿಧಿ ಯೋಜನೆಯಡಿ ನೋಂದಣಿಯಾಗಿರುವ ಅಭ್ಯರ್ಥಿಗಳಿಗೆ ಯುವನಿಧಿ ಪ್ಲಸ್ ಯೋಜನೆಯಡಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಬಹಳಷ್ಟು ಮಂದಿಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗೆ ಹೆಸರು ನೋಂದಾಯಿಸಿಕೊಂಡರೆ ಯುವನಿಧಿ ಯೋಜನೆಯಡಿ ನೀಡಲಾಗುತ್ತಿರುವ ಭತ್ಯೆ ನಿಂತುಹೋಗುತ್ತದೆ ಎಂಬ ತಪ್ಪು ಕಲ್ಪನೆಯಿದೆ. ಯುವನಿಧಿ ಯೋಜನೆಯಡಿ ತಿಳಿಸಿರುವಂತೆ 2 ವರ್ಷ ಅಥವಾ ಕೆಲಸ ಸಿಗುವವರೆಗೆ ಯಾವುದು ಮೊದಲು ಅಲ್ಲಿಯವರೆಗೆ ನಿರುದ್ಯೋಗ ಭತ್ಯೆ ನೀಡಲಾಗುವುದು. ಯುವನಿಧಿ ಪ್ಲಸ್ ಯೋಜನೆಯಡಿ ನೀಡಲಾಗುವ ಕೌಶಲ್ಯ ತರಬೇತಿಗೆ ಹೆಚ್ಚು ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಳ್ಳಿ ಎಂದರು.

ಈ ಹಿಂದೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆಸಿದ 6 ಉದ್ಯೋಗ ಮೇಳದಲ್ಲಿ 12966 ಅಭ್ಯರ್ಥಿಗಳು ಉದ್ಯೋಗ ಪಡೆದುಕೊಂಡಿದ್ದಾರೆ. ಕಾಲೇಜುಗಳ ಸಹಯೋಗದೊಂದಿಗೆ ನಡೆಸಿದ 3 ಉದ್ಯೋಗ ಮೇಳದಲ್ಲಿ 1177 ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿರುತ್ತದೆ‌. ಉದ್ಯೋಗ ಮೇಳದಲ್ಲಿ ಕನಿಷ್ಠ ಹಾಗೂ ಗರಿಷ್ಠ ವಿದ್ಯಾರ್ಹತೆ ಹೊಂದಿರುವವರಿಗೂ ಉದ್ಯೋಗಾವಕಾಶವಿದೆ ಎಂದು ಸಚಿವ ಡಾ. ಪಾಟೀಲ್‌ ತಿಳಿಸಿದರು.

ಕೌಶಲ್ಯ ಬೆಳೆಸಿಕೊಳ್ಳಲು ಅವಕಾಶ

ಯುವನಿಧಿ ಯೋಜನೆಯಡಿ ರಾಜ್ಯಾದ್ಯಂತ 3 ಲಕ್ಷ ಹಾಗೂ ಮೈಸೂರು ವಿಭಾಗದಲ್ಲಿ 43500 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಅವರಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲಾಗುತ್ತಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವುದರಿಂದ ಪರೋಕ್ಷವಾಗಿ ಉದ್ಯೋಗಾಕಾಂಕ್ಷಿಗಳು, ಉದ್ಯೋಗದಾತರು, ನೇರ ಸಂಪರ್ಕ ಸಾಧಿಸಬಹುದು. ಯಾವ ತಂತ್ರಜ್ಞಾನ, ಕೌಶಲ್ಯಗಳಿಗೆ ಹೆಚ್ಚು ಬೇಡಿಕೆ ಇದೆ ಎಂಬುದನ್ನು ತಿಳಿದುಕೊಂಡು, ಕೌಶಲ್ಯಗಳನ್ನು ಬೆಳೆಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಾಂತ ನಾಯಕ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಜಿ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಎನ್ ನಾಗರಾಜ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande