ಚಿತ್ರದುರ್ಗ, 12 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ಶ್ರಿ ಮದಕರಿ ವಿದ್ಯಾಸಂಸ್ಥೆ ವತಿಯಿಂದ ಕೋಟೆ ಮುಂಭಾಗದ ಮಹಾರಾಣಿ ಕಾಲೇಜು ಸಭಾಂಗಣದಲ್ಲಿ ಅಕ್ಟೋಬರ್ 15ರಂದು ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಯುವಜನೋತ್ಸವದಲ್ಲಿ 15 ರಿಂದ 29 ವರ್ಷದೊಳಗಿನ ಜಿಲ್ಲೆಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಯುವಕ ಯುವತಿಯರು ಭಾಗವಹಿಸಬಹುದು. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರು ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಬಹುದು.
ಸಾಂಸ್ಕೃತಿಕ ಸ್ಪರ್ಧೆಗಳ ಪೈಕಿ ಜನಪದ ನೃತ್ಯ ಹಾಗೂ ಗೀತೆ ಗಾಯನ ಸ್ಪರ್ಧೆಯಲ್ಲಿ 10 ಜನರು ಭಾಗವಹಿಸಬಹುದು. 10 ಜನರ ಜನಪದ ನೃತ್ಯ 15 ನಿಮಿಷ ಜನಪದ ಗೀತೆ ತಂಡಕ್ಕೆ 7 ನಿಮಿಷ ಸಮಯ ನಿಗದಿಪಡಿಸಲಾಗಿದೆ.
ವೈಯಕ್ತಿಕ ಸ್ಪರ್ಧೆಯಲ್ಲಿ 1000 ಪದ ಮೀರದಂತೆ ಹಿಂದಿ, ಆಂಗ್ಲ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಕಥೆ ಬರೆಯಲು 60 ನಿಮಿಷ ಕಾಲಾವಕಾಶವಿದೆ. ಚಿತ್ರಕಲೆ ಸ್ಪರ್ಧೆಯಲ್ಲಿ 3 ಸೈಜ್ 11.7 ಇಂಚು* 16.5 ಇಂಚು ಮೀರದಂದೆ ಚಿತ್ರ ಬಿಡಿಸಲು 90 ನಿಮಿಷ ಸಮಯ ನೀಡಲಾಗಿದೆ.
ಹಿಂದಿ ಇಂಗ್ಲೀಷ್ ಭಾಷೆಯ ಘೋಷಣೆ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಆಯ್ದುಕೊಂಡ ವಿಷಯಗಳ ಕುರಿತು ಭಾಷಣಕ್ಕೆ 7 ನಿಮಿಷ ಅವಕಾಶವಿದೆ. ಹಿಂದಿ, ಆಂಗ್ಲ ಹಾಗೂ ಪ್ರಾದೇಶಿಕ ಭಾಷೆಯಲ್ಲಿ ಕವಿತೆ ಬರೆಯಲು 90 ನಿಮಿಷ ನೀಡಲಾಗಿದೆ.
ರಾಜ್ಯ ಮಟ್ಟದ ವಿಜ್ಞಾನ ಮೇಳ ಪ್ರದರ್ಶನದಲ್ಲಿ 5 ಜನರ ಗುಂಪು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08192-237480 ಕರೆ ಮಾಡುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa