ಬಳ್ಳಾರಿ, 12 ಅಕ್ಟೋಬರ್ (ಹಿ.ಸ.) :
ಆ್ಯಂಕರ್: ಮಹಿಳೆಯನ್ನು ಹೊಲದಲ್ಲಿ ಬಲತ್ಕಾರ ಮಾಡಲು ವಿಫಲಯತ್ನ ನಡೆಸಿ, ಜೀವಬೆದರಿಕೆ ಹಾಕಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ಕಲ್ಲುಕಂಭದ ವ್ಯಕ್ತಿಗೆ ನ್ಯಾಯಾಲಯವು 03 ವರ್ಷ ಸಾಧಾರಣ ಜೈಲು ಶಿಕ್ಷೆ ಮತ್ತು ರೂ.2,000/- ದಂಡ ವಿಧಿಸಿ ತೀರ್ಪು ನೀಡಿದೆ.
ಕಲ್ಲುಕಂಭ ಗ್ರಾಮ ನಿವಾಸಿ ಕಡ್ಲೆ ರಾಮಲಿಂಗಪ್ಪನು ದಿನಾಂಕ 13.11.2017 ರಂದು ಕಲ್ಲುಕಂಭ ಗ್ರಾಮದ ಸಮೀಪದ ಮಾರುತಿ ಕ್ಯಾಂಪ್ ರಸ್ತೆಯ ಕೃಷಿ ಭೂಮಿಯಲ್ಲಿದ್ದ ದಂಪತಿಗಳು ಕೆಲಸ ಮಾಡುತ್ತಿದ್ದಾಗ, ಕೃಷಿಕಳ ಗಂಡ ಬೇರೆಯ ಆಳಿನ ಜೊತೆಯಲ್ಲಿ ಬೇರೆಯ ಹೊಲದಲ್ಲಿ ಕೆಲಸಕ್ಕೆ ಹೋದಾಗ, ಶಿಕ್ಷಿತನು ಹೊಲದಲ್ಲಿದ್ದ ಕೃಷಿಕಳ ಮೇಲೆ ಮಾನಭಂಗ ಮಾಡುವ ಉದ್ದೇಶದಿಂದ ಆಕೆಯ ಕೈ ಹಿಡಿದು ಎಳೆದಾಡಿ, ಅನುಚಿತವಾಗಿ ವರ್ತಿಸಿದ್ದನು. ಮಹಿಳೆಯು ಆರೋಪಿಯಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಬೆನ್ನಿಗೆ ಹೊಡೆದು, ಅವಾಚ್ಯ ಶಬ್ದಗಳಿಂದ ಬೈದು, ನಿನ್ನ ಗಂಡನಿಗೆ ಹೇಳಿದರೆ ನಿನ್ನನ್ನು ಜೀವಂತ ಉಳಿಸುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿದ್ದನು.
ಈ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಾದಾಗಿನ ಪಿಎಸ್ಸೈ ಸಿ.ಜಿ. ಚೈತನ್ಯ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ನ್ಯಾಯಾಧೀಶರಾದ ಮುದುಕಪ್ಪ ಓದನ್ ಅವರು ತೀರ್ಪು ಪ್ರಕಟ ಮಾಡಿ, ಆರೋಪಿಯ ವಿರುದ್ಧ ಕಲಂ 354(ಬಿ) ಐ.ಪಿ.ಸಿ. ಅಪರಾಧಕ್ಕೆ 03 ವರ್ಷ ಸಾಧಾರಣ ಕಾರಾಗ್ರಹ ಶಿಕ್ಷೆ ಹಾಗೂ ರೂ.2,000/- ದಂಡ ಮತ್ತು ಕಲಂ.341, 323, 504, 506 ಐ.ಪಿ.ಸಿ.ಗಳಿಗಾಗಿ ಪ್ರತ್ಯೇಕ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಮುರ್ತುಜಾಸಾಬ ಅವರು ವಾದ ಮಂಡಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್