ರಾಯಚೂರು, 11 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಜಂಟಿಯಾಗಿ ಸೇರಿ ಜಿಲ್ಲಾದ್ಯಂತ ಎಲ್ಲ ಶಾಲಾ ಕಾಲೇಜುಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಅಭಿಯಾನ ಮಾದರಿಯಲ್ಲಿ ಕಡ್ಡಾಯ ರೂಪಿಸಿ ವಿದ್ಯಾರ್ಥಿ ಯುವಜನರು ತಪ್ಪು ಹಾದಿಗೆ ಹೋಗದಂತೆ ನೋಡಿಕೊಳ್ಳಬೇಕು ಎಂದು ವಿಧಾನ ಸಭೆ ಸದಸ್ಯರೂ ಆಗಿರುವ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಎನ್ ಎಚ್ ಕೋನರೆಡ್ಡಿ ಅವರು ಆಯಾ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಇನ್ನೀತರ ಇಲಾಖೆಗಳ ಯೋಜನೆಗಳ ಹಾಗೂ ಕಾರ್ಯಕ್ರಮಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ರಾಯಚೂರು ಜಿಲ್ಲೆಯಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ದಾಖಲಾದ ಪೋಕ್ಸೊ ಜೊತೆ ಅತ್ಯಾಚಾರ, ಬಾಲ್ಯವಿವಾಹ, ಅಪಹರಣ, ಬಾಲ ಕಾರ್ಮಿಕರ ಸಂಖ್ಯೆಯ ಅಂಕಿ ಸಂಖ್ಯೆಗಳನ್ನು ಗಮನಿಸಿದಾಗ ಆತಂಕವಾಗುತ್ತದೆ. ಸಮಾಜದಲ್ಲಿ ಈಗಿನ ಮಕ್ಕಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ದಾರಿ ತಪ್ಪುತ್ತಿದ್ದಾರೆ ಎಂಬುದು ತಿಳಿಯುತ್ತಿದೆ. ನಾವು ತಪ್ಪು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಮಕ್ಕಳು, ವಿದ್ಯಾರ್ಥಿ ಯುವಜನರಲ್ಲಿ ಅರಿವಿಲ್ಲದ್ದಕ್ಕೆ ಅತ್ಯಾಚಾರ, ಬಾಲಗರ್ಭಿಣಿಯರ ಪ್ರಕರಣಗಳು ಹೆಚ್ಚುತ್ತಿದೆ ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳು ತಿಳಿಸುತ್ತಿದ್ದಾರೆ. ಸಂಬಂಧಿಸಿದ ಆಯಾ ಇಲಾಖೆಗಳ ಅಧಿಕಾರಿಗಳು, ಜಿಲ್ಲಾಧಿಕಾರಿಗಳ, ಜಿಲ್ಲಾ ಪಂಚಾಯತ್ ಸಿಇಓ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲಾದ್ಯಂತ ಎಲ್ಲ ಶಾಲಾ ಕಾಲೇಜುಗಳಲ್ಲಿ ಅಭಿಯಾನ ರೀತಿಯಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲೇಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ 2021ರಲ್ಲಿ 45, 2022ರಲ್ಲಿ 53, 2023ರಲ್ಲಿ 66, 2024ರಲ್ಲಿ 86 ಮತ್ತು 2025ರಲ್ಲಿ 44 ಪೋಕ್ಸೊ ಜೊತೆ ಅತ್ಯಾಚಾರ ಪ್ರಕರಣಗಳು ಹಾಗೂ 2021 ಮತ್ತು 2022ರಲ್ಲಿ ತಲಾ 7, 2023ರಲ್ಲಿ 13, 2024ರಲ್ಲಿ 12 ಮತ್ತು 2025ರಲ್ಲಿ 11 ಪೊಕ್ಸೊ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ 11, 2022ರಲ್ಲಿ 1, 2023ರಲ್ಲಿ 5, 2024ರಲ್ಲಿ 2 ಮತ್ತು 2025ರಲ್ಲಿ 7 ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ 128, 2022ರಲ್ಲಿ 155, 2023ರಲ್ಲಿ 209, 2024ರಲ್ಲಿ 193 ಮತ್ತು 2025ರಲ್ಲಿ 203 ಮಹಿಳಾ ಕಾಣೆ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ ಅವರು ಸಭೆಗೆ ಮಾಹಿತಿ ನೀಡಿದರು.
ಮಕ್ಕಳು ದಾರಿ ತಪ್ಪುವುದಕ್ಕೆ ಮೂಲ ಕಾರಣ ಏನು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು. ವಿಶೇಷವಾಗಿ ಜಿಲ್ಲಾ ಪೊಲೀಸ್ ಇಲಾಖೆಯು ಶಾಲಾ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಮತ್ತು ಕಾಲ್ಭೆಜು ಶಿಕ್ಷಣ ಇಲಾಖೆಗಳ ಸಹಯೋಗದೊಂದಿಗೆ ಪೊಕ್ಸೊ ಕುರಿತಂತೆ ಕಾಲೇಜು ಮಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು ಜೊತೆಗೆ ಮಕ್ಕಳ ಪಾಲಕರಿಗೆ ಸಹ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಮಿತಿಯ ಅಧ್ಯಕ್ಷರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
18 ವರ್ಷದೊಳಗಿನ ಮಕ್ಕಳ ಮೇಲೆ ವಿಶೇಷ ನಿಗಾ ಇಡಬೇಕು. ಈ ಬಗ್ಗೆ ಬೇರೆ ಬೇರೆ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಮಿತಿಯ ಸದಸ್ಯರಾದ ಹೆಚ್.ಎ.ಇಕ್ಬಾಲ್ ಹುಸೇನ ಪೊಲೀಸ್ ಅಧಿಕಾರಿಗಳಿಗೆ ಸಲಹೆ ಮಾಡಿದರು.
ಸಭೆಯಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ಗಂಭೀರವಾಗಿ ಗಮನಹರಿಸಿ ಎಲ್ಲವನ್ನು ಸರಿಪಡಿಸುತ್ತೇವೆ. ಸಭೆಯಲ್ಲಿ ತಿಳಿಸಿದ ಬೇರೆ ಬೇರೆ ಅಂಶಗಳ ಬಗ್ಗೆ ಕ್ರಮವಹಿಸಿದ ವಿಶೇಷ ವರದಿಯನ್ನು ಬರುವ ಶುಕ್ರವಾರದೊಳಗೆ ಸಲ್ಲಿಸುತ್ತೇವೆ. ಆಯಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸರಿಯಾಗಿ ಸಮನ್ವಯ ಸಾಧಿಸಿ, ಆಯಾ ಇಲಾಖೆಗಳ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಹೆಚ್ಚಿಗೆ ಒತ್ತು ನೀಡಿ, ಪ್ರಗತಿ ಸಾಧಿಸಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ತೆಗೆಯಲು ಶಕ್ತಿಮೀರಿ ಪ್ರಯತ್ನಿಸಲಾಗುವುದು ಎಂದು ಇದೆ ವೇಳೆ ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಸಭೆಗೆ ತಿಳಿಸಿದರು.
ಸಭೆಯಲ್ಲಿ ಶಾಸಕರು ಆಗಿರುವ ಸಮಿತಿಯ ಸದಸ್ಯರಾದ ಶರಣಗೌಡ ಕಂದಕೂರ, ಕರೆಮ್ಮ ಜಿ ನಾಯಕ, ಶಾಂತಾರಾಮ್ ಬುಡ್ನಸಿದ್ದಿ, ಸಚಿವಾಲಯದ ಜಂಟಿ ಕಾರ್ಯದರ್ಶಿ ಎಂ ಮಂಜುಳಾ, ಐಜಿಪಿ ಸತೀಶಕುಮಾರ, ಬಳ್ಳಾರಿ ವಲಯದ ಎಡಿಐಜಿ ವರ್ತಿಕಾ ಕಟಿಯಾರ, ಜಿಪಂ ಸಿಇಓ ಈಶ್ವರ್ ಕಾಂದೂ, ಎಸ್ಪಿ ಪುಟ್ಟಮಾದಯ್ಯ ಎಂ, ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಹಾಗು ಇನ್ನೀತರ ಇಲಾಖೆಗಳ ಅಧಿಕಾರಿಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್