ರಾಯಚೂರು, 11 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಪೋಕ್ಸೊ, ಪೋಕ್ಸೊ ಜೊತೆ ಅತ್ಯಾಚಾರ, ಬಾಲ್ಯವಿವಾಹ, ಬಾಲ ಕಾರ್ಮಿಕ, ಮಹಿಳೆಯರು ಹಾಗೂ ಮಕ್ಕಳ ಕಾಣೆ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ವಿಶೇಷವಾಗಿ ಚರ್ಚಿಸಲು ವಿಶೇಷವಾಗಿ ರಾಯಚೂರು ಜಿಲ್ಲೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ಬೇರೆ ಬೇರೆ ವಿಷಯಗಳ ಬಗ್ಗೆ ಸಮಗ್ರ ಚರ್ಚಿಸಿ ತೀರ್ಮಾನಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ವಿಧಾನ ಸಭೆ ಸದಸ್ಯರೂ ಆಗಿರುವ ಕರ್ನಾಟಕ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಎನ್ ಎಚ್ ಕೋನರೆಡ್ಡಿ ಅವರು ತಿಳಿಸಿದರು.
ರಾಯಚೂರು ಜಿಲ್ಲಾ ಪ್ರವಾಸದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಮಿತಿಯ ಇತರ ಸದಸ್ಯರೊಂದಿಗೆ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಚೂರು ಜಿಲ್ಲೆಯಲ್ಲಿ ಸಮಿತಿಯ ಸಭೆ ನಡೆಯಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾಗಿರುವ ದೇವದುರ್ಗ ಶಾಸಕರಾದ ಕರೆಮ್ಮ ಅವರು ಕೋರಿದ್ದರು. ಪೋಕ್ಸೊ, ಪೋಕ್ಸೊ ಜೊತೆ ಅತ್ಯಾಚಾರ, ಬಾಲ್ಯವಿವಾಹ, ಬಾಲ ಕಾರ್ಮಿಕದಂತಹ ಪ್ರಕರಣಗಳ ವಿಷಯವನ್ನು ಕರ್ನಾಟಕ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯು ಗಂಭೀರವಾಗಿ ಪರಿಗಣಿಸಿದೆ. ರಾಯಚೂರ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂಬುದರ ಬಗ್ಗೆ ಗೊತ್ತಾಗಿ ಈ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿ ಸರಿಪಡಿಸುವ ಪ್ರಯತ್ನದಿಂದ ಸಮಿತಿಯು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದೆ ಎಂದು ಅವರು ತಿಳಿಸಿದರು.
ಮಕ್ಕಳು ಮತ್ತು ವಿದ್ಯಾರ್ಥಿ ಯುವಜನರ ಬಗ್ಗೆ ಸರಿಯಾಗಿ ನೋಡಿಕೊಳ್ಳಬೇಕು. ರಾಜ್ಯದ ಯಾವುದೇ ಕಡೆಗಳಲ್ಲಿ ಪೋಕ್ಸೊ, ಬಾಲ್ಯವಿವಾಹ, ಬಾಲ ಕಾರ್ಮಿಕ ಪ್ರಕರಣಗಳು ದಾಖಲಾಗದಂತೆ ಮುನ್ನೆಚ್ಚರಿಕೆ ವಹಿಸಲು ಆಯಾ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲು ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಸಮಿತಿಯ ಎಲ್ಲ ಸದಸ್ಯರಿಗೆ ಸಲಹೆ ಮಾಡಿದ್ದಾರೆ. ಹಾಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯು ಬೆಂಗಳೂರು ಕೇಂದ್ರ ಸ್ಥಾನದಲ್ಲಿ ಎರಡು, ಹೊರ ಜಿಲ್ಲೆಯಲ್ಲಿ ಒಂದು ಸಭೆಯನ್ನು ನಿಯಮಿತವಾಗಿ ನಡೆಸುತ್ತಿದೆ. ರಾಯಚೂರು ಸೇರಿದಂತೆ ರಾಜ್ಯಾದ್ಯಂತ ಪೋಕ್ಸೊ, ಅತ್ಯಾಚಾರ, ಬಾಲ್ಯವಿವಾಹ, ಮಹಿಳೆಯರ ಮತ್ತು ಮಕ್ಳಳ ಅಪಹರಣದ, ಬಾಲ ಕಾರ್ಮಿಕ ಪ್ರಕರಣಗಳ ಸಂಖ್ಯೆ ಇಳಿಕೆಗೆ ಸಮಿತಿಯು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ ಎಂದು ಎನ್ ಎಚ್ ಕೋನರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.
ಈ ವೇಳೆ, ಶಾಸಕರು ಆಗಿರುವ ಸಮಿತಿಯ ಸದಸ್ಯರಾದ ಹೆಚ್.ಎ.ಇಕ್ಬಾಲ್ ಹುಸೇನ, ಶರಣಗೌಡ ಕಂದಕೂರ, ಕರೆಮ್ಮ ಜಿ ನಾಯಕ, ಶಾಂತಾರಾಮ್ ಬುಡ್ನಸಿದ್ದಿ, ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಎಸ್ ಶಿವರಾಜ ಪಾಟೀಲ ಹಾಗೂ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್