ಬೆಂಗಳೂರು, 11 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ವರುಣನ ಅಬ್ಬರ ಮುಂದುವರಿದಿದೆ. ಶುಕ್ರವಾರ ರಾತ್ರಿ ಇಡೀ ಸುರಿದ ಭಾರಿ ಮಳೆಯಿಂದ ಬೆಂಗಳೂರು ತತ್ತರಿಸಿದ್ದು, ಅನೇಕೆಡೆ ರಸ್ತೆಗಳು ಜಲಾವೃತಗೊಂಡಿವೆ.
ಧಾರಾಕಾರ ಮಳೆಯಿಂದ ಕೆ.ಆರ್.ಮಾರ್ಕೆಟ್, ಕೆ.ಆರ್.ಪುರಂ, ಸರ್ಜಾಪುರ ರಸ್ತೆ, ಬನ್ನೇರುಘಟ್ಟ ರಸ್ತೆ, ಯಶವಂತಪುರ, ಬಿಟಿಎಂ ಲೇಔಟ್, ಶಾಂತಿನಗರ, ಕಾರ್ಪೋರೇಷನ್ ವೃತ್ತ ಸೇರಿ ಹಲವು ಭಾಗಗಳಲ್ಲಿ ಮಳೆ ನೀರು ನಿಂತು ಸಂಚಾರ ಅಸ್ತವ್ಯಸ್ತಗೊಂಡಿದೆ. ನಾಗರಬಾವಿಯಲ್ಲಿ ಬೃಹತ್ ಮರಗಳು ನೆಲಕ್ಕುರುಳಿದ್ದು, ವಿಲ್ಸನ್ ಗಾರ್ಡನ್ ರಸ್ತೆಯಲ್ಲಿ ಎರಡು ಅಡಿ ಆಳದ ನೀರು ನಿಂತಿದೆ.
ಕೆಲ ಮನೆಗಳ ಸಂಪ್‌ಗಳಿಗೆ ಕೊಳಚೆ ನೀರು ನುಗ್ಗಿದ ಪರಿಣಾಮ ನಾಗರಿಕರು ಪರದಾಡುವಂತಾಗಿದೆ. ಕೆ.ಆರ್.ಪುರಂನ ಭೀಮಯ್ಯ ಲೇಔಟ್‌ನಲ್ಲಿ ಕಾರುಗಳು ನೀರಲ್ಲಿ ಮುಳುಗಡೆಯಾಗಿವೆ.
ಮುಂದಿನ 72 ಗಂಟೆಗಳ ಕಾಲ ಭಾರಿ ಮಳೆಯಾಗಲಿದ್ದು, ಅಕ್ಟೋಬರ್ 15ರವರೆಗೆ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa