ಕೊಪ್ಪಳ, 11 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಆಟ ಅನ್ನುವದು ಹಕ್ಕಾಗಬೇಕಿದೆ, ಆರೋಗ್ಯ, ಆಯುಷ್ಯ ಮತ್ತು ಬೆಳವಣಿಗೆಗೆ ಪ್ರತಿ ಮಗುವೂ ಸಹ ಕ್ರೀಡೆ ಜೊತೆಗೆ ಬೆರೆಯಬೇಕಿದೆ ಎಂದು ಕರ್ನಾಟಕ ರಾಜ್ಯ ಷಟಲ್ ಕಾಕ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಕರೆ ನೀಡಿದರು.
ನಗರದ ಎಸ್.ಎಫ್.ಎಸ್. ಪ್ರೌಢ ಶಾಲೆಯ ಕ್ರೀಡಾ ಉತ್ಸವವನ್ನು ಶಾಲಾ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನದ ವಂದನೆ ಸ್ವೀಕರಿಸಿ ಕ್ರೀಡಾ ಜ್ಯೋತಿಯನ್ನು ಸ್ವಾಗತಿಸುವ ಮೂಲಕ ಕ್ರೀಡಾಕೊಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದ ಹಲವು ದಶಕಗಳಿಂದ ಎಸ್.ಎಫ್.ಎಸ್. ಶಾಲೆಗಳ ಸಮೂಹ ಅತ್ತ್ಯುತ್ತಮವಾದ ಶಿಕ್ಷಣಕ್ಕೆ ಹೆಸರಾಗಿದೆ, ಕ್ರೀಡೆಗೂ ಸಹ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಶಾಲೆ ಪ್ರಯತ್ನ ಮಾಡುತ್ತಿದೆ, ಆದರೆ ಪೋಷಕರು ಮಾತ್ರ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಅಗತ್ಯವಿಲ್ಲದ ಅಂಕಗಳ ಹಿಂದೆ ಓಡುತ್ತ ಅವರ ಆರೋಗ್ಯವನ್ನು ಗಮನಿಸುತ್ತಿಲ್ಲ, ಆದರೆ ಎಲ್ಲಾ ಕಡೆಗೆ ಪ್ರೋತ್ಸಾಹ ಹಾಗೂ ಅವಕಾಶ ಇರುವ ಕ್ರೀಡೆಯಲ್ಲೂ ಸಾಧನೆ ಮಾಡಬೇಕಿದೆ ಎಂದರು.
ಸಿಇಟಿ, ನೀಟ್ ಮುಂತಾದ ವಿದ್ಯಾಭ್ಯಾಸ ಹಾಗೂ ಉದ್ಯೋಗದಲ್ಲಿ ಕ್ರೀಡಾ ಮೀಸಲಾತಿ ಇರುವದರಿಂದ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು, ತಮ್ಮ ಇಷ್ಟದ ಒಂದು ವಯಕ್ತಿಕ ಮತ್ತು ಒಂದು ಗುಂಪು ಸ್ಪರ್ಧೆಯಲ್ಲಿ ಸರಿಯಾಗಿ ಕಲಿತು ಸಾಧಿಸಬೇಕು ಎಂದರು. ಮಕ್ಕಳ ಆರೋಗ್ಯ, ದೈಹಿಕ ಬಲ, ಮಾಂಸ ಖಂಡ, ಎಲುಬಿನ ಬೆಳವಣಿಗೆ ಶಕ್ತಿಗೆ ನಿರಂತರವಾದ ಕ್ರೀಡೆಯ ಜೊತೆಗಿನ ಒಡನಾಟ ಅಗತ್ಯ ಎಂದ ಅವರು, ಶಾಲೆ ಮುಂದಾದಲ್ಲಿ ವಿಶೇಷವಾದ ತರಬೇತಿ ಕೊಡಿಸಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವಂತೆ ಪ್ರೋತ್ಸಾಹ ನೀಡಲಾಗುವದು ಎಂದರು.
ಶಾಲಾ ಕವಾಯತ್ತು, ಸಾಮೂಹಿಕ ಏರೋಬಿಕ್ಸ್, ಸಾಮೂಹಿಕ ಪ್ರಾರ್ಥನೆ ಮೂಲಕ ಗಮನ ಸೆಳೆದ ಕ್ರೀಡಾ ಉತ್ಸವದಲ್ಲಿ ಸಾವಿರಾರು ಮಕ್ಕಳು ಅತ್ಯಂತ ಸಂತೊಷದಿಂದ ಪಾಲ್ಗೊಂಡಿದ್ದರು.
ಸಭೆಯ ಅಧ್ಯಕ್ಷತೆಯನ್ನು ಮುಖ್ಯೋಪಾದ್ಯಾಯರಾದ ರೇ. ಫಾ. ಜೊಜೊ ವಹಿಸಿದ್ದರು. ವೇದಿಕೆಯಲ್ಲಿ ಎಸ್.ಎಫ್.ಎಸ್. ಐಸಿಎಸ್ ನ ಮುಖ್ಯೋಪಾದ್ಯಾಯರಾದ ರೇ. ಫಾ. ಜಪಮಾಲೆ ರೇ.ಫಾ. ಮ್ಯಾಥ್ಯುವ್ ಮಾಮಲಾ ಇದ್ದರು.
ಶಾಲಾ ಮಕ್ಕಳು ಅತ್ಯಂತ ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸೋನಿಕಾ ಹಾಗೂ ಸಂಗಡಿಗರು ಪ್ರಾರ್ಥನೆಯನ್ನು ನೆರೆವೇರಿಸಿದರು. 9ನೇ ತರಗತಿ ವಿದ್ಯಾರ್ಥಿಗಳಾದ ಕು. ಸಿರಿ ಹಾಗೂ ಗೌರಿ ಪಾಟೀಲ್ ನಿರೂಪಣೆ ಮಾಡಿದರು. 8ನೇ ತರಗತಿ ವಿದ್ಯಾರ್ಥಿ ಶ್ರೇಯಾ ವಂದನಾರ್ಪಣೆ ಮಾಡಿದರು. ನಂತರ ಕ್ರೀಡಾ ಸ್ಪರ್ಧೆಗಳು ಜರುಗಿದವು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್