ಗಾಜಾ ಪಟ್ಟಿ, 11 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಎರಡು ವರ್ಷಗಳ ನಂತರ ಗಾಜಾ ಪಟ್ಟಿ ಇಂದು ಬೆಳಿಗ್ಗೆ ಶಾಂತವಾಗಿತ್ತು. ಇಸ್ರೇಲ್ ಮತ್ತು ಹಮಾಸ್ ನಡುವಿನ ಮೊದಲ ಹಂತದ ಕದನ ವಿರಾಮ ಇಂದು ಬೆಳಿಗ್ಗೆ 5 ಗಂಟೆಗೆ ಅಧಿಕೃತವಾಗಿ ಜಾರಿಗೆ ಬಂದಿತು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಈಜಿಪ್ಟ್‌ನ ಶರ್ಮ್ ಎಲ್-ಶೇಖ್‌ನಲ್ಲಿ ನಡೆದ ಪರೋಕ್ಷ ಮಾತುಕತೆಯ ವೇಳೆ ಎರಡೂ ಕಡೆಯವರು ಶಾಂತಿ ಪ್ರಸ್ತಾವನೆಗೆ ಸಹಿ ಹಾಕಿದರು.
ಒಪ್ಪಂದದ ಪ್ರಕಾರ, ಹಮಾಸ್ ಸೋಮವಾರ ಬೆಳಿಗ್ಗೆ 5 ಗಂಟೆಯೊಳಗೆ ಒಟ್ಟು 48 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ. ಅವರಲ್ಲಿ 20 ಮಂದಿ ಜೀವಂತವಾಗಿರುವ ಸಾಧ್ಯತೆಯಿದೆ. ಇಸ್ರೇಲಿ ಪಡೆಗಳು ತಮ್ಮ ವಾಪಸಾತಿಯನ್ನು ಪ್ರಾರಂಭಿಸಿವೆ. ಮೊದಲ ಹಂತದಲ್ಲಿ ಗಾಜಾದ ಪ್ರಮುಖ ಪ್ರದೇಶಗಳಿಂದ ಪಡೆಗಳನ್ನು ಹಿಂತೆಗೆದುಕೊಳ್ಳುವುದು ಹಾಗೂ ಸ್ಥಳಾಂತರಗೊಂಡ ಪ್ಯಾಲೆಸ್ಟೀನಿಯನ್ನರನ್ನು ತಮ್ಮ ಮನೆಗಳಿಗೆ ಹಿಂದಿರುಗಲು ಅವಕಾಶ ನೀಡುವುದು ಒಳಗೊಂಡಿದೆ.
ಸಿಎನ್ಎನ್ ವರದಿ ಪ್ರಕಾರ, ಉತ್ತರ ಗಾಜಾದಿಂದ ಇಸ್ರೇಲಿ ಪಡೆಗಳನ್ನು ಹಿಂತೆಗೆದುಕೊಳ್ಳುತ್ತಿದ್ದಂತೆಯೇ ಸಾವಿರಾರು ಪ್ಯಾಲೆಸ್ಟೀನಿಯನ್ನರು ತಮ್ಮ ಮನೆಗಳಿಗೆ ಮರಳಲು ಪ್ರಾರಂಭಿಸಿದ್ದಾರೆ. ವಿಶ್ವಸಂಸ್ಥೆಯ ಇಸ್ರೇಲ್ ರಾಯಭಾರಿ ಡ್ಯಾನಿ ಡ್ಯಾನನ್ ಅವರು “ಒತ್ತೆಯಾಳುಗಳು ಮತ್ತು ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಬಿಡುಗಡೆ ಮಾಡುವುದು ಶಾಂತಿ ಯೋಜನೆಯ ಸುಲಭ ಭಾಗ. ಆದರೆ ಮುಂದಿನ ಹಂತಗಳಲ್ಲಿ, ನಾವು ಎಚ್ಚರಿಕೆಯಿಂದ ಇರಬೇಕಾಗಿದೆ” ಎಂದು ಹೇಳಿದ್ದಾರೆ.
ರಾಯಭಾರಿ ಡ್ಯಾನನ್ ಅವರ ಪ್ರಕಾರ, ಶಾಂತಿ ಯೋಜನೆಯ ಎರಡನೇ ಹಂತದಲ್ಲಿ ಗಾಜಾದ ಸೇನಾ ನಿಷ್ಕ್ರಿಯೀಕರಣದ ವಿಷಯವನ್ನು ಎರಡು ಕಡೆಯವರು ಪರಿಗಣಿಸುತ್ತಿದ್ದಾರೆ. ಪ್ರಸ್ತುತ, ಒತ್ತೆಯಾಳುಗಳ ಬಿಡುಗಡೆ ಮತ್ತು ಕದನ ವಿರಾಮದ ಅನುಷ್ಠಾನ ಪ್ರಕ್ರಿಯೆ ನಡೆಯುತ್ತಿದೆ.
ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ ವತಿಯಿಂದ ನೂರಾರು ಟ್ರಕ್‌ಗಳು ವೈದ್ಯಕೀಯ ಸಾಮಗ್ರಿ ಮತ್ತು ಆಸ್ಪತ್ರೆ ಉಪಕರಣಗಳೊಂದಿಗೆ ಗಾಜಾಗೆ ಪ್ರವೇಶಿಸಲು ಸಿದ್ಧವಾಗಿವೆ. ಅಮೆರಿಕದ ಪಡೆಗಳು ಇಸ್ರೇಲ್‌ನಲ್ಲಿ ಶಾಂತಿ ಅನುಷ್ಠಾನದ ಮೇಲ್ವಿಚಾರಣೆಗೆ ಸಮನ್ವಯ ಕೇಂದ್ರವನ್ನು ಸ್ಥಾಪಿಸಲು ಆಗಮಿಸಿವೆ. ಪ್ರಾರಂಭಿಕವಾಗಿ 200 ಅಮೆರಿಕನ್ ಸೈನಿಕರು ಇಸ್ರೇಲ್‌ಗೆ ಬಂದಿದ್ದು, ಅವರು ಸಾರಿಗೆ, ಲಾಜಿಸ್ಟಿಕ್ಸ್, ಭದ್ರತೆ ಹಾಗೂ ಎಂಜಿನಿಯರಿಂಗ್‌ನಲ್ಲಿ ಪರಿಣತರು ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa