ಮೈಸೂರು, 01 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ದೇಶದೆಲ್ಲೆಡೆ ಇಂದು ಆಯುಧ ಪೂಜೆ ಸಂಭ್ರಮ ನಡೆಯುತ್ತಿದ್ದು, ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಅದ್ಧೂರಿ ಆಚರಣೆ ನಡೆದಿದೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಪುರೋಹಿತರ ಮಾರ್ಗದರ್ಶನದಲ್ಲಿ ಆಯುಧ ಪೂಜೆ ನೆರವೇರಿಸಿದರು.
ಬೆಳಗ್ಗೆ ಚಂಡಿಕಾ ಹೋಮದೊಂದಿಗೆ ಕಾರ್ಯಕ್ರಮ ಆರಂಭವಾಗಿ, ಆಯುಧಗಳನ್ನು ಪಲ್ಲಕ್ಕಿಯಲ್ಲಿ ಕೋಡಿ ಸೋಮೇಶ್ವರ ದೇವಾಲಯಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಶುದ್ಧೀಕರಣದ ಬಳಿಕ ಮತ್ತೆ ಅರಮನೆಗೆ ತರಲಾಗಿದ್ದು, ಆನೆಬಾಗಿಲು ಮೂಲಕ ಕಲ್ಯಾಟಮಂಟಪಕ್ಕೆ ಕೊಂಡೊಯ್ದು ಸಿಂಹಾಸನಕ್ಕೆ ಜೋಡಿಸಿದ್ದ ಸಿಂಹಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು.
ಯದುವೀರ್ ಒಡೆಯರ್‌ರಿಂದ ಕರಿಕಲ್ಲು ತೊಟ್ಟಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದ್ದು, ಪಟ್ಟದ ಆನೆ, ಕುದುರೆ, ಒಂಟೆ, ಹಸು, ಹಾಗು ಅರಮನೆಯ ಐಷಾರಾಮಿ ವಾಹನಗಳಿಗೂ ಪೂಜೆ ನಡೆಯಿತು.
ಸಂಜೆ ಖಾಸಗಿ ದರ್ಬಾರ್ ನಡೆಯಲಿದ್ದು, ಬೆಳ್ಳಿದ್ವಾರದಿಂದ ಪ್ರವೇಶಿಸುವ ಯದುವೀರ್ ಒಡೆಯರ್ ಅವರು ಸಿಂಹಾಸನವೇರಿ ದರ್ಬಾರ್ ನಡೆಸಲಿದ್ದಾರೆ. ಬಳಿಕ ಸಂಸ್ಥಾನ ಗೀತೆ, ಪೊಲೀಸ್ ಬ್ಯಾಂಡ್ ವಾದ್ಯ, ಪರಾಕ್ ಕೂಗು, ಹಾಗೂ ರಾಣಿಯವರ ಪಾದಪೂಜೆಯೊಂದಿಗೆ ಆಯುಧಪೂಜೆ ಸಮಾರಂಭ ಸಂಪನ್ನಗೊಳ್ಳಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa