ಗದಗ, 01 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಹೂವಿನ ತೋಟಗಾರಿಕೆ ರೈತರಿಗೆ ಬದುಕಿನ ಬೆಳಕು ತೋರಿಸಿತ್ತು. ದಸರಾ, ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಹೂವಿನ ಬೇಡಿಕೆ ಹೆಚ್ಚುತ್ತದೆ ಎಂಬ ನಿರೀಕ್ಷೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಸೇವಂತಿ, ಚೆಂಡು, ಗಲಾಟೆ ಸೇರಿ ಹಲವಾರು ಬಗೆಯ ಹೂಗಳನ್ನು ರೈತರು ಬೆಳೆದಿದ್ದರು. ಆದರೆ ನಿರಂತರ ಮಳೆಯಿಂದಾಗಿ ಈ ಹೂ ತೋಟಗಳು ಒಣಗಿ ಬಾಡುತ್ತಿದ್ದು, ರೈತರ ಕನಸು ನುಚ್ಚುನೂರಾಗಿದೆ.
ಅತೀಯಾದ ಮಳೆಯಿಂದ ತೇವಾಂಶ ಹೆಚ್ಚಾಗಿ, ಹಸಿರು ತೋಟ ಬಾಡಿದಂತಾಗಿದೆ
ಲಕ್ಕುಂಡಿ, ಶಿರುಂಜ್, ಪಾಪನಾಶಿ, ಕಣವಿ, ಹೊಸೂರ ಗ್ರಾಮಗಳಲ್ಲಿ ಹೂ ತೋಟಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಕಲರ್ ಕಲರ್ ಹೂಗಳಿಂದ ಹೊಳೆಯುತ್ತಿದ್ದ ತೋಟದಲ್ಲಿ ರೈತನ ಮುಖದಲ್ಲಿ ಮಂದಹಾಸವಿತ್ತು. ಆದರೆ ಇದೀಗ ದಿನದಿಂದ ದಿನಕ್ಕೆ ಹೂ ಗಿಡಗಳು ಒಣಗುತ್ತಿದ್ದು, ರೈತರು ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಜೆ ಹಸಿರಾಗಿದ್ದ ಗಿಡಗಳು ಬೆಳಿಗ್ಗೆ ಒಣಗಿರುವುದನ್ನು ನೋಡುವಾಗ ಹೃದಯವೇ ನೋವು ಕೊಡುತ್ತಿದೆ ಎಂದು ರೈತರು ಆಕ್ರಂದಿಸಿದ್ದಾರೆ.
ಹೂಡಿಕೆ ಬಂಡವಾಳ, ಕನಸಿನ ಲಾಭ
ಒಂದು ಎಕರೆ ಹೂ ತೋಟಕ್ಕೆ 1 ಲಕ್ಷದಿಂದ 1.5 ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ. ಒಬ್ಬೊಬ್ಬ ರೈತರು 4-5 ಎಕರೆ ಪ್ರದೇಶದಲ್ಲಿ ಹೂ ಬೆಳೆದು, ಕನಿಷ್ಠ 5–7 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಹಬ್ಬದ ಸಮಯದಲ್ಲಿ ಎಕರೆಗೆ 3–4 ಲಕ್ಷ ಲಾಭ ಸಿಗುತ್ತದೆ ಎಂಬ ನಿರೀಕ್ಷೆ ರೈತರಿಗಿತ್ತು. ಆದರೆ ನಿರಂತರ ಮಳೆಯಿಂದ ತೇವಾಂಶ ಹೆಚ್ಚಾಗಿ ಬೇರು ಕೊಳೆಯುತ್ತಿದ್ದು, ಹೂ ಗಿಡಗಳು ಒಣಗುತ್ತಿವೆ. ಇದರ ಪರಿಣಾಮವಾಗಿ ಹೂವಿನ ಬೇಡಿಕೆಯ ಬಂಪರ್ ಮಾರುಕಟ್ಟೆ ಕನಸೇ ಕನಸಾಗಿ ಉಳಿಯುವ ಭೀತಿ ಎದುರಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ರೈತರ ರೋಶ
“ಇಷ್ಟೊಂದು ಹಾನಿಯಾದರೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನಮ್ಮ ಗ್ರಾಮಗಳಿಗೆ ಭೇಟಿ ನೀಡಿಲ್ಲ. ತೋಟಗಳು ಏಕೆ ಒಣಗುತ್ತಿವೆ ಅನ್ನೋದರ ಪರಿಶೀಲನೆ ಕೂಡ ಮಾಡಿಲ್ಲ. ನಮ್ಮ ನೋವಿಗೆ ಸ್ಪಂದಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ” ಎಂದು ರೈತರು ಆರೋಪಿಸಿದ್ದಾರೆ. ಮಳೆ ಹಾನಿ ಪರಿಶೀಲನೆಗಾಗಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರೈತರ ಮನವಿ: ಪರಿಹಾರವೇ ಬದುಕಿಗೆ ದಾರಿ ಹೂ ತೋಟಗಾರಿಕೆ ರೈತರಿಗೆ ಈ ಬಾರಿ ಹಬ್ಬವೇ ಕಣ್ಣೀರು ತಂದುಕೊಟ್ಟಿದೆ. ಹೂವಿನೊಂದಿಗೆ ರೈತರ ಕನಸು ಕೂಡ ಬಾಡುತ್ತಿರುವ ಪರಿಸ್ಥಿತಿ ಎದುರಾಗಿದೆ. ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ ರೈತರು ಸಾಲದ ಭಾರದಲ್ಲಿ ನಲುಗುತ್ತಿದ್ದಾರೆ. ಸರ್ಕಾರ ನಮ್ಮ ಬಗ್ಗೆ ಕಣ್ತೆರೆದು ನೋಡಬೇಕು, ತಕ್ಷಣ ಪರಿಹಾರ ಘೋಷಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಈ ಬಾರಿ ದಸರಾ, ದೀಪಾವಳಿಯಲ್ಲಿ ಹೂವಿನ ಸೊಬಗು ಮಾರುಕಟ್ಟೆಯಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ. ಮಳೆ ಬೇಟೆಯಿಂದಾಗಿ ಹೂವಿನ ತೋಟಗಳು ನಾಶವಾಗುತ್ತಿರುವುದು ಗದಗ ಜಿಲ್ಲೆಯ ತೋಟಗಾರ ರೈತರ ಬದುಕಿಗೆ ಭಾರಿ ಆಘಾತ ತಂದಿದೆ.
ಹಿಂದೂಸ್ತಾನ್ ಸಮಾಚಾರ್ / lalita MP