ಕೋಲಾರ, ೦೧ ಅಕ್ಟೋಬರ್ (ಹಿ.ಸ) :
ಆ್ಯಂಕರ್ : ಸಚಿವ ಕೆ.ಹೆಚ್. ಮುನಿಯಪ್ಪನವರು ಲೋಕಸಭಾ ಚುನಾವಣೆಯಲ್ಲಿ ಸೋತನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ರಾಜ್ಯ ಸಚಿವ ಸಂಪುಟಲ್ಲಿ ಸಚಿವರಾಗಿದ್ದಾರೆ. ಮುನಿಯಪ್ಪನವರು ತಮ್ಮ ರಾಜಕೀಯ ನೆಲೆಯನ್ನು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯಲ್ಲಿ ಕಂಡುಕೊ0ಡರು ಸಹ ಕೋಲಾರ ಜಿಲ್ಲೆಯಲ್ಲಿ ಮುನಿಯಪ್ಪನವರ ಬೆಂಬಲಿಗರಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಾಲೂರಿನ ಲಕ್ಷಿನಾರಾಯಣ ಹಾಗು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮುನಿಯಪ್ಪನವರ ಬೆಂಗಲಿಗರಾಗಿದ್ದಾರೆ.ಲೋಕಸಭಾ ಚುನಾವಣೆಯನಂತರ ಮುನಿಯಪ್ಪನವರ ಪ್ರಾಬಲ್ಯ ಕುಸಿದಿದೆ.ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನಿಲ್ ಕುಮಾರ್ ಹಾಗು ಇತರರು ಸರ್ಕಾರದ ಮಟ್ಟದಲ್ಲಿ ಹಾಗು ಪಕ್ಷದ ಆಗುಹೋಗುಗಳಲ್ಲಿ ಹಿಡಿತ ಸಾಧಿಸಿದ್ದಾರೆ.
ಮುನಿಯಪ್ಪನವರ ಹಿಡಿತ ತಪ್ಪಿಸಿ ಸಂಪೂರ್ಣವಾಗಿ ಪ್ರಾಬಲ್ಲ ಹೊಂದಬೇಕೆ0ಬುದು ರಮೇಶ್ ಕುಮಾರ್ ಹಾಗು ಇತರರ ರಹಸ್ಯ ಕಾರ್ಯಸೂಚಿ ಆಗಿದೆ.ಲೋಕಸಭಾ ಚುನಾವಣೆಯಲ್ಲಿ ಮುನಿಯಪ್ಪನವರ ವಿರುಧ್ದ ಬಹಿರಂಗವಾಗಿ ಕೆಲಸ ಮಾಡಿ ಅವರ ಸೋಲಿಗೆ ಕಾರಣರಾದ ಚಿಂತಾಮಣಿಯ ಡಾ.ಸುಧಾಕರ್ ಕೊತ್ತೂರು ಮಂಜನಾಥ್‌ರವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಅಲ್ಲದೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಲಾಯಿತು.ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುಧ್ದ ಕ್ರಮಕೈಗೊಳ್ಳುವ ಬದಲು ರತ್ನಗಂಬಳಿ ಹಾಸಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಆರೋಪಿಸಿ ಕೆ.ಹೆಚ್.ಮುನಿಯಪ್ಪನವರು ಎಐಸಿಸಿಗೆ ರಮೇಶ್ ಕುಮಾರ್, ಡಾ.ಸುಧಾರಕ್, ಕೊತ್ತೂರು ಮಂಜುನಾಥ್ ಹಾಗೂ ಇತರರ ವಿರುದ್ಧ ದೂರು ಸಲ್ಲಿಸಿದ್ದರು. ಆದರೆ, ಎಐಸಿಸಿ ಅವರ ದೂರನ್ನು ಗ0ಭೀರವಾಗಿ ಪರಿಗಣಿಸಲಿಲ್ಲ. ಬದಲಾಗಿ ಮುನಿಯಪ್ಪನವರ ಅಭಿಪ್ರಾಯಕ್ಕೆ ವಿರುದ್ಧವಾಗಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಅವರೆಲ್ಲ ಈಗ ಪಕ್ಷದ ಮತ್ತು ಸರ್ಕಾದ ಪ್ರಮುಖ ಹುದ್ದೆಗಳಲ್ಲಿ ಇದ್ಧಾರೆ.
ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಸಂಪೂರ್ಣ ಹಿಡಿತಸಾಧಿಸಲು ಅವರ ಬೆಂಗಲಿಗರನ್ನು ಪಕ್ಷದ ಪ್ರಮುಖ ಹುದ್ದೆಗಳಿಂದ ಹೊರಹಾಕುವ ರಾಜಕೀಯ ಹುನ್ನಾರ ನಡೆದಿದೆ. ಆ ನಿಟ್ಟಿನಲ್ಲಿ ಕೋಲಾರ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು ಹಾಗು ಕೋಲಾರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ ಕುಮಾರ್‌ರವರನ್ನು ಹೊರಹಾಕಲಾಗಿದೆ.ಎರಡು ಸ್ಥಾನಗಳಿಗೆ ಅನಿಲ್ ಕುಮಾರ್ ಹಾಗು ಶಾಸಕ ಕೊತ್ತೂರ್ ಮಂಜುನಾಥ್ ಬೆಂಗಲಿಗರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷಿನಾರಾಯಣ ಹಾಗು ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್‌ರವರನ್ನು ಹೊರಹಾಕುವ ಹುನ್ನಾರ ನಡೆದಿದೆ. ಆ ಮೂಲಕ ಸಚಿವ ಕೆ.ಹೆಚ್.ಮುನಿಯಪ್ಪನವರ ಬೆಂಬಲಿಗರಿಗೆ ಕಾಂಗ್ರೆಸ್ ದಿಡ್ಡಿ ಬಾಗಿಲು ಮುಚ್ಚಲು ರಾಜಕೀಯ ಒಳಸಂಚು ನಡೆದಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಮತ್ತು ಕಾರ್ಯಾಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಈ ಹಿಂದೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಲೆಕ್ಕುಂಟು ಆಟಕಿಲ್ಲ. ಲಕ್ಷಿನಾರಾಯಣ ಹಾಗು ಉರಬಾಗಿಲು ಶ್ರೀನಿವಾಸ್‌ರವರನ್ನು ಹೊರಹಾಕಿ ಅನಿಲ್ ಕುಮಾರ್ ಹಾಗೂ ಕೊತ್ತೂರ್ ಮಂಜುನಾಥ್‌ರವರಿಗೆ ನಿಷ್ಠರಾದವರನ್ನು ನೇಮಕ ಮಾಡಲು ತೆರೆಮರೆಯ ರಾಜಕೀಯ ಹುನ್ನಾರ ನಡೆದಿದೆ. ಇದರಿಂದಾಗಿಯೇ ಕೆ.ಹೆಚ್.ಮುನಿಯಪ್ಪ ಶಾಸಕರಾದ ರೂಪ ಶಶಿದರ್ ಹಾಗು ಎಸ್.ಎನ್.ನಾರಾಯಣ ಸ್ವಾಮಿ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ರವರನ್ನು ಬೇಟಿ ಮಾಡಿ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷಿನಾರಾಯಣರವರನ್ನು ಮುಂದುವರೆಸುವ0ತೆ ಮನವಿ ಮಾಡಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಿನ್ನಾಭಿಪ್ರಾಯಗಳ ಒಳಸುಳಿಗಳು ಮುಂದುವರೆದಿವೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಾಯಕತ್ವದ ಕೊರತೆ ಇದೆ. ಇತ್ತೀಚಿನ ದಿನಗಳಲ್ಲಿ ಶಾಸಕ ಎಸ್.ಎನ್.ನಾರಾಯಣ ಸ್ವಾಮಿ ಹಾಗು ಮಾಲುರು ಶಾಸಕ ನಂಜೇ ಗೌಡರ ನಡುವಿನ ಭಿನ್ನಾಬಿಪ್ರಾಯಗಳಿಂದಾಗಿ ಪಕ್ಷ ಹಾಗು ಸರ್ಕಾರದ ವರ್ಚಸ್ಸಿಗೆ ದಕ್ಕೆ ಆಗಿದೆ.ಮುಖ್ಯ ಮಂತ್ರಿಗಳು ಸೇರಿದಂತೆ ಕೆ.ಪಿ.ಸಿ.ಸಿ ಅಧ್ಯಕ್ಷರಿಗೆ ಸಂಪೂರ್ಣ ಮಾಹಿತಿ ಇದ್ದರು ಕೂಡ ಯಾರು ಆಸಕ್ತಿವಹಿಸಿ ಭಿನ್ನಾಬಿಪ್ರಾಯಗಳನ್ನಯ ಬಗೆಹರಿಸಲು ಆಸಕ್ತಿ ತೋರಿಲ್ಲ.
ಹಲವು ದಿನಗಳಿಂದ ಕೋಲಾರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕೆ ನಡೆಯುತ್ತಿದ್ದ ಶೀತಲ ಸಮರ ಸ್ಫೋಟಗೊಂಡಿದೆ. ಸಚಿವ ಕೆ.ಹೆಚ್.ಮುನಿಯಪ್ಪನವರ ಬೆಂಬಲಿಗರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿದೆ. ಕಳೆದ ೧೦ ವರ್ಷಗಳಿಂದ ನಿರಂತರವಾಗಿ ಕೋಲಾರ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪ್ರಸಾದ್ ಬಾಬು ಅವರ ಅಧಿಕಾರದ ಅವಧಿ ಮುಗಿದಿದೆ.
ಒಂದು ಕಾಲದಲ್ಲಿ ಅನಿಲ್‌ಕುಮಾರ್ ಒಡನಾಡಿಯಾಗಿದ್ದ ಪ್ರಸಾದ್‌ಬಾಬು ಬದಲಾದ ರಾಜಕಾರಣದಲ್ಲಿ ಕೆ.ಹೆಚ್. ಮುನಿಯಪ್ಪ ನವರನ್ನು ಹಿಂಬಾಲಿಸಿದರು. ಕಳೆದ ಒಂದು ವರ್ಷದಿಂದ ಅವರನ್ನು ಪದಚ್ಯುತಿಗೊಳಿಸಿ, ಬೇರೆಯವರನ್ನು ನೇಮಕ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಅನಿಲ್‌ಕುಮಾರ್ ಮತ್ತು ಶಾಸಕ ಕೊತ್ತೂರುಮಂಜುನಾಥ್, ಕೆಪಿಸಿಸಿ ಅಧ್ಯಕ್ಷರಿಗೆ ಅಹವಾಲು ಸಲ್ಲಿಸಿದ್ದರು.
ಈ ಅಹವಾಲಿಗೆ ಕೆಪಿಸಿಸಿ ಅಧ್ಯಕ್ಷರು ಸ್ಪಂದಿಸಿ, ಪ್ರಸಾದ್‌ಬಾಬು ಅವರನ್ನು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಬಿಡುಗಡೆ ಮಾಡಿದ್ದಾರೆ. ಕೋಲಾರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಉದಯಕುಮಾರ್ ಕಳೆದ ನಾಲ್ಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ವಿವಾದಗಳಿಂದ ದೂರವಿರುವ ಉದಯಕುಮಾರ್ ಸೌಮ್ಯ ವ್ಯಕ್ತಿಯಾಗಿದ್ದು ಕೆ. ಹೆಚ್. ಮುನಿಯಪ್ಪನವರ ಬೆಂಬಲಿಗರಾಗಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಬಿಡುಗಡೆ ಮಾಡಲಾಗಿದೆ.
ಕೋಲಾರ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸೈಯದ್ ಅಪ್ಸರ್ ಹಾಗೂ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಮೈಲಾಂಡಹಳ್ಳಿ ಮುರಳಿ ಅವರನ್ನು ಕೆಪಿಸಿಸಿ ನೇಮಕ ಮಾಡಿದೆ.
ನೂತನವಾಗಿ ನೇಮಕವಾಗಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅನಿಲ್‌ಕುಮಾರ್ ಮತ್ತು ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಆಪ್ತರಾಗಿದ್ದಾರೆ. ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಮೈಲಾಂಡಹಳ್ಳಿ ಮುರಳಿ, ಹಾಗೂ ನಗರ ಬ್ಲಾಕ್ ಅಧ್ಯಕ್ಷರಾಗಿ ನಗರಸಭೆ ಸದಸ್ಯ ಸೈಯದ್ ಅಪ್ಸರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಂಗಳವಾರ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ಚಿತ್ರ : ಅಪ್ಸರ್ ಪಾಷ, ಮೈಲಾಂಡಹಳ್ಳಿ ಮುರಳಿ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್