ಕೋಲಾರ, ೦೧ ಅಕ್ಟೋಬರ್ (ಹಿ.ಸ) :
ಆ್ಯಂಕರ್ : ಗ್ರಾಮೀಣ ಭಾಗದಲ್ಲಿ ಯುವಕರು ಕ್ರೀಡೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವುದರ ಮೂಲಕ ಮೊಬೈಲ್ ಮತ್ತು ದುಶ್ಚಟಗಳಿಂದ ದೂರ ಇರಬಹುದು ಎಂದು ಬೇತಮಂಗಲ ವೃತ್ತ ನಿರೀಕ್ಷಕ ರಂಗಶಾಮಯ್ಯ ತಿಳಿಸಿದರು.
ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಗ್ರಾಮದಲ್ಲಿ ಸುವರ್ಣ ಭೂಮಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಬೇತಮಂಗಲ ದಸರಾ ಕಬ್ಬಡಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ, ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ದುಶ್ಚಟಗಳಿಂದ ದೂರವಿರಬಹುದು ಹಾಗೂ ಸದೃಢ ದೇಹವನ್ನು ಕಾಪಾಡಿಕೊಳ್ಳಬಹುದು ಎಂದು ಕಿವಿಮಾತು ನುಡಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ವಿನು ಕಾರ್ತಿಕ್ ಮಾತನಾಡಿ, ನಾವು ಸಹ ಸಣ್ಣ ವಯಸ್ಸಿನಲ್ಲಿ ಕಬ್ಬಡಿ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುತ್ತಿದ್ದೇವು. ಇವತ್ತು ಇರುವ ವಯಸ್ಸು ನಾಳೆ ಇರುವುದಿಲ್ಲ ಅದರಿಂದ ಯುವಕರು ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚು ಹೆಚ್ಚು ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಿ ಮುನ್ನಡೆಯಿರಿ ಮತ್ತು ಈ ಒಂದು ಕ್ರೀಡಾಕೂಟವು ಬೇರೆಯವರಿಗೂ ಮಾದರಿಯಾಗಬೇಕು ಇಂತಹ ಇನ್ನಷ್ಟು ಕಾರ್ಯಕ್ರಮಗಳನ್ನು ನಮ್ಮ ಗ್ರಾಮೀಣ ಭಾಗದಲ್ಲಿ ಮಾಡಬೇಕು ಎಂದು ಹೇಳಿದರು.
ಬೇತಮಂಗಲದಲ್ಲಿ ಕ್ರೀಡಾಕೂಟ ನಡೆಸುತ್ತಿರುವುದು ಉತ್ತಮ ಕೆಲಸ, ಅದೇ ರೀತಿ ಮುಂದಿನ ದಿನಗಳಲ್ಲಿ ಸಹ ರಾಜ್ಯ ಮಟ್ಟದ ಕ್ರೀಡಾಕೂಟವು ಬೇತಮಂಗಲ ಭಾಗದಲ್ಲಿ ನಡೆಯಲಿ, ತಾವು ಕೈಲಾದಷ್ಟು ಸಹಕಾರ ನೀಡುತ್ತೇವೆ ಎಂದು ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಯ್ಯಪಲ್ಲಿ ಮಂಜುನಾಥ್ ಭರವಸೆ ನೀಡಿದರು.
ಬೇತಮಂಗಲ ದಸರಾ ಕ್ರೀಡಾಕೂಟದಲ್ಲಿ ಕರ್ನಾಟಕ, ಆಂದ್ರ ಪ್ರದೇಶ ಹಾಗೂ ತಮಿಳು ನಾಡಿನಿಂದ ಕಬ್ಬಡಿ ತಂಡಗಳು ಪಾಲ್ಗೊಂಡಿದ್ದವು.
ಪ್ರಥಮ ಬಹುಮಾನವನ್ನು ಸಮಾಜ ಸೇವಕರಾದ ವಿ. ಮೋಹನ್ ಕೃಷ್ಣ ಅವರು ೨೦ಸಾವಿರ ರೂಪಾಯಿ ನಗದು ನೀಡಿದ್ದರು ಧರ್ಮಸ್ಥಳ ತಂಡ ತಮ್ಮ ಉತ್ತಮವಾದ ಆಟವನ್ನು ಆಡಿ ೨೦ ಸಾವಿರ ನಗದು ಮತ್ತು ಆಕರ್ಷಕ ಟ್ರೋಪಿ ತಮ್ಮದಾಗಿಸಿಕೊಂಡರು. ದ್ವಿತೀಯ ಬಹುಮಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನು ಕಾರ್ತಿಕ್ ಅವರು ೧೦ ಸಾವಿರ ನಗದು ನೀಡಿದ್ದರು ವಿನಾಯಕ -ಬಿ ತಂಡ ದ್ವಿತೀಯ ಸ್ಥಾನ ಪಡೆದು ಹತ್ತು ಸಾವಿರ ನಗದು ಮತ್ತು ಆಕರ್ಷಕ ಟ್ರೋಪಿ ತಮ್ಮದಾಗಿಸಿಕೊಂಡರು ,ತೃತೀಯ ಬಹುಮಾನ ಕೆಜಿಎಫ್ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಹರಿ ಅವರು ೫ ಸಾವಿರ ನಗದು ಬಹುಮಾನ ನೀಡಿದರು ಕುಪ್ಪಂ ತಂಡ ಐದು ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಪಿ ತಮ್ಮದಾಗಿಸಿಕೊಂಡರು, ನಾಲ್ಕನೇ ಬಹುಮಾನ ಸುವರ್ಣ ಭೂಮಿ ಟ್ರಸ್ಟ್ ವತಿಯಿಂದ ೨ ಸಾವಿರ ನಗದು ಬಹುಮಾನ ನೀಡಿದರು ಎಸ್.ಕೆ.ತಂಡ ಬೆಂಗಳೂರು ನಾಲ್ಕನೇ ಸ್ಥಾನ ಪಡೆದು ಎರಡು ಸಾವಿರ ನಗದು ಬಹುಮಾನ ಆಕರ್ಷಕ ಟ್ರೋಫಿ ಪಡೆದರು.ಜಯ ಗಳಿಸಿದಂತಹ ಎಲ್ಲಾ ತಂಡಗಳಿಗೂ ಆಕರ್ಷಕ ಟ್ರೋಪಿಗಳನ್ನು ಶ್ರೀ ಸಾಯಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ತೇಜಸ್ವಿನಿ ಸತೀಶ್ ಅವರು ಕೊಡುಗೆಯಾಗಿ ನೀಡಿದ್ದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಯೋಜನಾಧಿಕಾರಿ ಮಹಾದೇವ್ ನಾಯಕ್, ಗ್ರಾಮ ಪಂಚಾಯಿತಿ ಸದಸ್ಯರಾದ ಆಳುಮೇಲಮ್ಮ,ಶ್ರೀನಿವಾಸ್,ಮಮತಾ ಗಣೇಶ, ಶೇಷಾದ್ರಿ, ಪ್ರಿಯಾ ಧರಣಿ,ನಲ್ಲೂರು ಶಂಕರ್,ರಾ0 ಬಾಬು,ನಿವೃತ್ತ ಸೈನಿಕರಾದ ಸುಬ್ರಮಣಿ,ಶಿಕ್ಷಕರಾದ ನೆರ್ನಹಳ್ಳಿ ಶಂಕರ್,ರೈತ ಸಂಘದ ಕಾರ್ಯಾಧ್ಯಕ್ಷ ಅಬ್ಬಣಿ ಶಿವಣ್ಣ, ಆನಂದ್, ಶ್ರೀನಾಥ್ ನಾಸ್ತಿಕ್, ಬಡಮಕನಹಳ್ಳಿ ವೆಂಕಟೇಶ್, ಉಮೇಶ್, ಚಂದ್ರಶೇಖರ್, ಜೈನ್,ಸುವರ್ಣ ಭೂಮಿ ಟ್ರಸ್ಟ್ ಪದಾಧಿಕಾರಿಗಳಾದ ಪ್ರೆಸ್ ಮಂಜು, ಹರೀಶ್, ಪ್ರಶಾಂತ್ ಸೇರಿದಂತೆ ದೈಹಿಕ ಶಿಕ್ಷಕರು ಹಾಗೂ ಕ್ರೀಡಾ ಅಭಿಮಾನಿಗಳು ಭಾಗವಹಿಸಿದ್ದರು.
ಚಿತ್ರ: ಕೆಜಿಎಫ್ ತಾಲ್ಲೂಕಿನ ಬೇತಮಂಗಲದಲ್ಲಿ ಸ್ವರ್ಣಭೂಮಿ ಫೌಂಡೇಷನ್‌ನಿ0ದ ನಡೆದ ಕಬ್ಬಡಿ ಕ್ರೀಡಾಕೂಟವನ್ನು ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಂಗಶಾಮಯ್ಯ ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್