ಕೋಲಾರ, ೦೧ ಅಕ್ಟೋಬರ್ (ಹಿ.ಸ) :
ಆ್ಯಂಕರ್ : ಇಲ್ಲಿನ ಜಿಲ್ಲಾ ಒಳಾಂಗಣ ಕ್ರೀಡಾಂಗಣಕ್ಕೆ ಮಹಾರಾಷ್ಟ್ರದ ಅಹಲ್ಯಾಬಾಯಿ ಹೋಳ್ಕರ್ ಹೆಸರನ್ನು ನಾಮಕರಣ ಮಾಡುವಂತೆ ಕೋಲಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿ ಕ್ರೀಡಾ ಇಲಾಖೆಗೆ ಶಿಫಾರಸ್ಸು ಮಾಡಿರುವುದನ್ನು ಕನ್ನಡ ಪಕ್ಷ ಹಾಗೂ ಡಾ.ರಾಜಕುಮಾರ್ ಅಭಿಮಾನಿಗಳ ಸಂಘವು ತೀವ್ರವಾಗಿ ವಿರೋಧಿಸಿದೆ.
ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ಡಾ.ರಾಜಕುಮಾರ್ ನಾಡಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಕೋಲಾರ ಜಿಲ್ಲಾ ವಿಶ್ವೇಶ್ವರಯ್ಯ ಕ್ರೀಡಾಂಗಣ ಸಂಗೀತ ರಸ ಸಂಜೆ ಕಾರ್ಯಕ್ರಮಗಳನ್ನು ನಡೆಸಿ ಸಹಾಯಾರ್ಥವಾಗಿ ಬಂದ ಲಕ್ಷಾಂತರ ರೂಪಾಯಿ ನೆರವು ನೀಡಲಾಯಿತು. ಜಿಲ್ಲೆಯ ಜನತೆ ಸದಾ ನೆನಪಿಸುವಂತಹ ಕಾರ್ಯವನ್ನು ಮಾಡಿರುವ ಡಾ.ರಾಜಕುಮಾರ್ ರವರ ಹೆಸರನ್ನು ಒಳಾಂಗಣ ಕ್ರೀಡಾಂಗಣಕ್ಕೆ ನಾಮಕರಣ ಮಾಡುವಂತೆ ೧೫ ವರ್ಷಗಳಿಂದ ಕನ್ನಡಪರ ಸಂಘಟನೆಗಳು ಡಾ.ರಾಜಕುಮಾರ್ ನಾಮಕರಣ ಹೋರಾಟ ಸಮಿತಿ ಮೂಲಕ ಒತ್ತಾಯ ಮಾಡುತ್ತ ಬಂದಿದೆ.
ಕ್ರೀಡಾಭಿಮಾನಿಗಳಿಂದ ಸಿ.ಮುನಿಸ್ವಾಮಿ ರವರ ಹೆಸರನ್ನು ಒಳಾಂಗಣ ಕ್ರೀಡಾಂಗಣಕ್ಕೆ ನಾಮಕರಣ ಮಾಡುವಂತೆ ಒತ್ತಾಯ ಬಂದ ಹಿನ್ನೆಲೆಯಲ್ಲಿ ಯಾರ ಹೆಸರನ್ನು ಸೂಚಿಸಿದ ಕ್ರೀಡಾ ಇಲಾಖೆಯು ಜಿಲ್ಲಾ ಒಳಾಂಗಣ ಕ್ರೀಡಾಂಗಣವೆAದು ನಾಮಕರಣ ಮಾಡಿತು. ಆದರೆ ಕನ್ನಡಪರ ಸಂಘಟನೆಗಳು ಪಟ್ಟು ಬಿಡದೆ ಡಾ. ರಾಜಕುಮಾರ್ ಹೆಸರನ್ನು ನಾಮಕರಣ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದಿದೆ. ಯೋಗ ಗುರು ಡಿಕೆ.ಅಯ್ಯಂಗಾರ್ ಹೆಸರನ್ನು ಒಳಾಂಗಣ ಕ್ರೀಡಾಂಗಣಕ್ಕೆ ನಾಮಕರಣ ಮಾಡುವಂತೆ ಒತ್ತಾಯ ಬಂದಿದ್ದು ಸಪ್ಟೆಂಬರ್ ೨೯ರಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಕ್ರೀಡಾಂಗಣಕ್ಕೆ ಮಹನೀಯರ ಹೆಸರಿಡುವ ವಿಷಯ ಚರ್ಚೆಗೆ ಬಂದಾಗ ಈ ವಿಷಯ ಬೇಡ ಮಂತ್ರಿಗಳು ಹೇಳಿರುವಂತೆ ಮಹಾರಾಷ್ಟ್ರದ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಹೆಸರನ್ನು ನಾಮಕರಣ ಮಾಡಲು ಕ್ರೀಡ ಇಲಾಖೆಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ.
ಒಳಾಂಗಣ ಕ್ರೀಡಾಂಗಣವು ನಿರ್ಮಾಣವಾಗಿರುವುದು ನಗರಸಭೆಗೆ ಸೇರಿದ ಸ್ಥಳ ಎಂಬ ಕಾರಣಕ್ಕೆ ತಾವು ಹೆಸರನ್ನು ಸೂಚಿಸಲು ಬರುವುದಿಲ್ಲ. ಕ್ರೀಡಾಂಗಣವು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸೇರಿದ್ದು ಕ್ರೀಡಾಂಗಣಕ್ಕೆ ಯಾವ ಮಹನೀಯರ ಹೆಸರಿಡಬೇಕೆನ್ನುವುದರ ಬಗ್ಗೆ ಹೆಚ್ಚು ಜನರು ಯಾರನ್ನು ಒತ್ತಾಯಿಸಿ ಹೆಸರಿಸುತ್ತಾರೆಯೆ ಅಂಥವರ ಹೆಸರನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ಶಿಫಾರಸ್ಸು ಮಾಡುವ ಮೂಲಕ ಹೆಸರನ್ನು ನಾಮಕರಣ ಮಾಡುವುದು ಕ್ರಮಬದ್ಧವಾಗಿರುತ್ತದೆ. ಕನ್ನಡ ನಾಡು-ನುಡಿ ನೆಲ-ಜಲದ ಬಗ್ಗೆ ನಾಡಿನ ವಿರುದ್ಧ ಕ್ಯಾತೆ ತೆಗೆದು ಸರ್ಕಾರದ ವಿರುದ್ಧ ಇರುವ ಹಾಗೂ ಗಡಿ ಭಾಗದ ಕನ್ನಡಿಗರ ಮೇಲೆ ದೌರ್ಜನ್ಯ ಎಸಗುತ್ತಾ ಪುಂಡಾಟಿಕೆ ನಡೆಸುತ್ತಿರುವ ಎಂಇಎಸ್ ಮತ್ತು ಶಿವಸೇನೆ ವಿರುದ್ಧ ಕನ್ನಡಿಗರು ಹೋರಾಟ ಮಾಡುತ್ತಾ ಬಂದಿದ್ದು, ಕನ್ನಡಿಗರ ಬದಲಿಗೆ ಮಹಾರಾಷ್ಟ್ರದ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ರವರ ಹೆಸರನ್ನು ಗಡಿ ಭಾಗದ ಕೋಲಾರದಲ್ಲಿ ಹೆಸರಿಡುವುದು ಸರಿ ಇಲ್ಲ. ಈಗಾಗಲೇ ಅವರ ಹೆಸರನ್ನು ಮಹಾರಾಷ್ಟ್ರದ ವಿವಿಧೆಡೆ ನಾಮಕರಣ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ. ಯೋಗ ಸಾಧಕ ಡಾ. ರಾಜಕುಮಾರ್ ಹೆಸರನ್ನು ನಾಮಕರಣ ಮಾಡುವಂತೆ ಒತ್ತಾಯಿಸುವುದಲ್ಲದೆ, ಬೇರೆಯವರ ಹೆಸರನ್ನು ನಾಮಕರಣ ಮಾಡಲು ಮುಂದಾದರೆ ಹೋರಾಟವನ್ನು ಮಾಡಬೇಕಾಗುವುದೆಂದು ಸಂಘದ ಪ್ರಧಾನ ಕಾರ್ಯದರ್ಶಿ ನಾ. ಮಂಜುನಾಥ್ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಚಿತ್ರ : ಕೋಲಾರ ನಗರದ ಒಳಾಂಗಣ ಕ್ರೀಡಾಂಗಣ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್