
ಬೆಂಗಳೂರು, 02 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ವಿದ್ಯಾರಣ್ಯಪುರ ಮುಖ್ಯರಸ್ತೆಯ ನರಸಿಪುರ ಕೆರೆಯ ಬಫರ್ ಜೋನ್‌ನಲ್ಲಿ ನಿಯಮ ಉಲ್ಲಂಘಿಸಿ ಹಾಲಿನ ಬೂತ್ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ನರಸಿಪುರ ಕೆರೆಯ ಸರ್ವೆ ನಂ. 20ರ ಎಸ್‌ಟಿಪಿ ಜಾಗದಲ್ಲಿ ಕಳೆದ ಆಗಸ್ಟ್ 14ರಂದು ಹಾಲಿನ ಬೂತ್ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಆದರೆ ಬುಧವಾರ ವಿದ್ಯಾರಣ್ಯಪುರ ಪೊಲೀಸರ ರಕ್ಷಣೆಯಲ್ಲಿ ಮತ್ತೆ ಕಾಮಗಾರಿ ನಡೆಸಿ ಹಾಲಿನ ಬೂತ್ ನಿರ್ಮಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅರಣ್ಯ ಇಲಾಖೆಗೆ ಸೇರಿದ ಕೆರೆ ಪ್ರದೇಶವು ಕೆರೆ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಲಿದ್ದು, ಬಫರ್ ಜೋನ್‌ನಲ್ಲಿ ಯಾವುದೇ ರೀತಿಯ ನಿರ್ಮಾಣ ಕಾಮಗಾರಿ ನಡೆಸುವುದು ಕಾನೂನುಬಾಹಿರ ಎಂದು ಬಿಬಿಎಂಪಿ ಮಾಜಿ ಸದಸ್ಯ ಹಾಗೂ ಸಾಮಾಜಿಕ ಹೋರಾಟಗಾರ ಈ. ಕೃಷ್ಣಪ್ಪ ಹೇಳಿದ್ದಾರೆ. ಅಕ್ರಮ ಕಾಮಗಾರಿ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ಎಚ್ಚರಿಸಿದ್ದಾರೆ.
ದೊಡ್ಡಬೊಮ್ಮಸಂದ್ರದ ಮೂಲನಿವಾಸಿ ನಾರಾಯಣಮೂರ್ತಿ ಮಾತನಾಡಿ, ನರಸಿಪುರ ಕೆರೆ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಇಂತಹ ಜಾಗದಲ್ಲಿ ಹಾಲಿನ ಬೂತ್ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಕಾನೂನುಬಾಹಿರ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.
ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರು ಹಸ್ತಕ್ಷೇಪ ಮಾಡಬಾರದು ಎಂಬ ಕರ್ನಾಟಕ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ, ಕೆರೆ ಜಾಗದಲ್ಲಿ ನಿರ್ಮಾಣ ಕಾಮಗಾರಿ ನಡೆಸುವವರಿಗೆ ವಿದ್ಯಾರಣ್ಯಪುರ ಪೊಲೀಸರು ರಕ್ಷಣೆ ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.